ಪುಣೆ: ಉಪಾವಾಸ ನಿರತನಾಗಿದ್ದ ಪ್ರಖ್ಯಾತ ಪಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿ ಐ ಐ) ವಿದ್ಯಾರ್ಥಿಯೊಬ್ಬನ ಆರೋಗ್ಯ ಹದಗೆಟ್ಟಿರುವುದರಿಂದ ಗುರುವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಪವಾಸ ಸಹ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹಿಲಾಲ್ ಸವದ್ ಅವರು ಆಸ್ಪತ್ರೆಯಲ್ಲಿ ಒಂದು ದಿನ ಉಳಿಯಲಿದ್ದಾರೆ.
"ಇದು(ಸುದ್ದಿ) ನಿಜ. ಅವರ ಹೆಸರು ಹಿಲಾಲ್ ಸವದ್. ೩೦ ಘಂಟೆಗಳ ನಂತರ ಅವರ ದೇಹದ ಸಕ್ಕರೆ ಪ್ರಮಾಣ ಕುಸಿದಿದೆ. ಅವರ ಕೈಗಳು ಮತ್ತು ಪಾದಗಳು ಮರಗಟ್ಟಿವೆ" ಎಂದು ಸತ್ಯಾಗ್ರಹದ ಸದಸ್ಯ ರಂಜಿತ್ ನಾಯರ್ ತಿಳಿಸಿದ್ದಾರೆ.
"ಅವರು ನಮ್ಮ ಕರೆಗಳಿಗೆ ಉತ್ತರಿಸುತ್ತಿಲ್ಲ. ವೈದ್ಯರು ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ. ಅವರಿಗೆ ಒಂದು ದಿನದ ವಿಶ್ರಾಂತಿ ಅಗತ್ಯವಿದೆ" ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಮತ್ತು ನಟ ಗಜೇಂದ್ರ ಚೌಹಾನ್ ಅವರನ್ನು ಎಫ್ ಟಿ ಐ ಐ ಅಧ್ಯಕ್ಷನಾಗಿ ನೇಮಿಸಿದ್ದ ಕೇಂದ್ರ ಸರ್ಕಾರದ ರಾಜಕೀಯ ನಡೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಈ ನೇಮಕಾತಿಯಿಂದ ಹಿಂಜರಿಯುವುದಕ್ಕೆ ಸರ್ಕಾರ ಒಪ್ಪದೇ ಹೋದದ್ದಕ್ಕೆ ಗುರುವಾರದಿಂದ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹದ ಮೊರೆ ಹೋಗಿದ್ದಾರೆ.
ಶನಿವಾರಕ್ಕೆ ಈ ಪ್ರತಿಭಟನೆ ೯೩ ನೆ ದಿನಕ್ಕೆ ಕಾಲಿಟ್ಟಿದೆ. ಮಣಿರತ್ನಂ, ಅಡೂರು ಗೋಪಾಲಕೃಷ್ಣ, ಗಿರೀಶ್ ಕಾಸರವಳ್ಳಿ, ವಿದ್ಯಾ ಬಾಲನ್ ಇನ್ನೂ ಮುಂತಾದ ಸಿನೆಮಾ ರಂಗದ ಗಣ್ಯರು ಈ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದಾರೆ.
ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಸಿನೆಮಾ ಪ್ರಪಂಚದ ೧೯೦ ಗಣ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೋರಿದ್ದಾರೆ.