ಶ್ರೀನಗರ: ಇದೇ ಮೊದಲ ಬಾರಿಗೆ ಶ್ರೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ ಸ್ಪರ್ಧೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶ್ರೀನಗರದ ಹಜ್ರತ್ ಬಾಲ್ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ ಸ್ಪರ್ಧೆಯ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹಿಂಸಾಚಾರ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಲಘು ಲಾಠಿ ಪ್ರಹಾರ ನಡೆಸಿವೆ. ಈ ವೇಳೆ ಆಕ್ರೋಶಗೊಂಡ ಕೆಲ ಯುವಕರ ಗುಂಪು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ತೀವ್ರ ಪ್ರಕ್ಷುಬ್ದ ವಾತಾವರಣೆ ನೆಲೆಸುವಂತೆ ಮಾಡಿವೆ.
ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪ್ಯಾರಾ ಮಿಲಿಟರಿ ಪಡೆಗಳು ಧಾವಿಸಿದ್ದು, ಪ್ರಕ್ಷುಬ್ಧ ಯುವಕರತ್ತ ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಿಸಿದವು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ 6.30ರ ಸಮಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾಶ್ಮೀರ ವಿಶ್ವವಿದ್ಯಾಲಯದಿಂದ ಆರಂಭಗೊಂಡ ಸುಮಾರು 21 ಕಿ.ಮೀ ದೂರದ ಮ್ಯಾರಥಾನ್ ಸ್ಪರ್ಧೆ ಪ್ರಮುಖ ಪ್ರವಾಸಿ ತಾಣ ದಾಲ್ ಲೇಖ್ ಸಮೀಪದ ಹಜ್ರತ್ ಬಾಲ್ ಬಳಿ ಪೂರ್ಣಗೊಂಡಿತ್ತು. ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುವಕನೋರ್ವ ಭದ್ರತಾ ಪಡೆಗಳ ವಿರುದ್ಧ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಸ್ಥಳೀಯರು ಮತ್ತು ಭದ್ರತಾ ಪಡೆಗಳ ನಡುವೆ ಹಿಂಸಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ.
ಅತ್ತ ಹಿಂಸಾಚಾರ ನಡೆಯುತ್ತಿದ್ದಂತೆಯೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಆಬ್ದುಲ್ಲಾ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.