ಭೋಪಾಲ್: ಮಧ್ಯಪ್ರದೇಶದ ಜಬುವಾ ಜಿಲ್ಲೆಯ ರೆಸ್ಟೋರೆಂಟ್‌ನಲ್ಲಿ ಶನಿವಾರ ಸಿಲಿಂಡರ್ ಸ್ಫೋಟಗೊಂಡ ಸ್ಥಳಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಿದ್ದಾರೆ.
ಶನಿವಾರ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ದಲ್ಲಿ 85ಕ್ಕಿಂತಲೂ ಹೆಚ್ಚು ಜನ ಸಾವನ್ನಪ್ಪಿದ್ದರು.
ಜಬುವಾಗೆ ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಚೌಹಾಣ್, ಪೆಟಲ್‌ವಾಡ್‌ನಲ್ಲಿ ನಡೆದ ಘಟನೆಯ ಬಗ್ಗೆ ನಾನು ದುಃಖಿತನಾಗಿದ್ದೇನೆ. ನಾನು ರಾತ್ರಿ ಮಲಗಿಯೇ ಇಲ್ಲ. ಈಗ ಅಲ್ಲಿನ ಜನರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಇಂಥಾ ದುರ್ಘಟನೆಗಳು ಮುಂದೆಂದೂ ಸಂಭವಿಸದಂತೆ ಎಚ್ಚರವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಸ್ಫೋಟಕಗಳನ್ನು ಶೇಖರಿಸಿದ್ದ ಗೋದಾಮಿನ ಮಾಲೀಕ ರಾಜೇಂದ್ರ ಕಸಾವಾ ಅವರ ಮನೆಗಳನ್ನು ಮತ್ತು ಗೋದಾಮುಗಳನ್ನು ಮುಚ್ಚಲಾಗಿದೆ.
ರಾಜೇಂದ್ರ ಕಸಾವೆ ವಿರುದ್ಧ 3/4 ಸ್ಫೋಟ ಕಾಯ್ದೆ ಮತ್ತು ಐಪಿಎಸ್ ಸೆಕ್ಷನ್ 304 ಪ್ರಕಾರ ಕೇಸು ದಾಖಲಿಸಲಾಗಿದೆ.
ಗ್ರಾಮಸ್ಥರ ಪ್ರತಿಭಟನೆ: ಕಟ್ಟಡದಲ್ಲಿ ಅಕ್ರಮವಾಗಿ ಸ್ಫೋಟಕ ಇಟ್ಟುಕೊಂಡಿದ್ದರ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.