ನವದೆಹಲಿ:ಎಲ್ಲಾ ಹಿಂಸೆಗಳು ಪುರುಷರಿಂದಲೇ ಆಗುವುದರಿಂದ ಲಿಂಗ ಸಂವೇದನಾಶೀಲತೆ ನಮ್ಮ ದೇಶದಲ್ಲಿ ಗಂಭೀರವಾಗಿದೆ ಎಂದು ಹೇಳುವ ಮೂಲಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ವಿವಾದದ ಕಿಡಿ ಎಬ್ಬಿಸಿದ್ದಾರೆ.
ಎಲ್ಲಾ ಹಿಂಸೆಗಳಿಗೂ ಪುರುಷರೇ ಕಾರಣ.ಈ ವಾತಾವರಣವನ್ನು ತಪ್ಪಿಸಲು ಶಾಲೆಗಳಲ್ಲಿ ನಾವು 'ಜಂಡರ್ ಚಾಂಪಿಯನ್'(ಲಿಂಗ ನಾಯಕತ್ವ) ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು, ಇಲ್ಲಿ ಹೆಣ್ಣುಮಕ್ಕಳಿಗೆ ಗೌರವ ತೋರುವ ಮತ್ತು ಸಹಾಯ ಮಾಡುವ ಹುಡುಗರಿಗೆ ಬಹುಮಾನಗಳನ್ನು ನೀಡುತ್ತೇವೆ ಎಂದು ಹೇಳಿದರು.
ಅವರು ಇಂದು ದೆಹಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವಾಲಯದ #100 ಮಹಿಳೆಯರು'' ಅಭಿಯಾನ ಕಾರ್ಯಕ್ರಮದಲ್ಲಿ ಫೇಸ್ ಬುಕ್ ಸಾಮಾಜಿಕ ಜಾಲತಾಣ ಬಳಸುತ್ತಿರುವ ಮಹಿಳೆಯರ ಜೊತೆ ಸಂವಾದ ನಡೆಸಿದರು.
ಈ ಅಭಿಯಾನವನ್ನು ಸಚಿವಾಲಯ ಫೇಸ್ ಬುಕ್ ಜೊತೆಗೂಡಿ ಆಯೋಜಿಸುತ್ತಿದ್ದು, ತಮ್ಮ ತಮ್ಮ ಸಮುದಾಯಗಳಲ್ಲಿ ಬದಲಾವಣೆ ತಂದ ದೇಶದ 100 ಮಹಿಳೆಯರನ್ನು ಸನ್ಮಾನಿಸಲಿದೆ.
ನೇರ ಸಂವಾದ ಕಾರ್ಯಕ್ರಮದಲ್ಲಿ ಸಚಿವೆ ಹತ್ತಿರ ಶಿಕ್ಷಣ, ಆರೋಗ್ಯ, ಮಹಿಳೆಯರ ಸುರಕ್ಷತೆ, ದೌರ್ಜನ್ಯ ಮೊದಲಾದವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಅವುಗಳಲ್ಲಿ ಕೆಲವೊಂದಕ್ಕೆ ಅವರು ಉತ್ತರಿಸಿದರು.
ಮೊನ್ನೆ ಗುರುಗಾಂವ್ ನಲ್ಲಿ ನೇಪಾಳಿ ಮೂಲದ ಇಬ್ಬರು ಮಹಿಳೆಯರ ಮೇಲೆ ಸೌದಿ ಅರೇಬಿಯಾ ರಾಜತಾಂತ್ರಿಕ ಅಧಿಕಾರಿಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಮನೇಕಾ ಗಾಂಧಿ, ಅದೊಂದು ಕಣ್ಣು ತೆರೆಸುವ ಪ್ರಕರಣ, ಮುಂದಿನ ದಿನಗಳಲ್ಲಿ ಅಂತಹ ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕೌಟುಂಬಿಕ ಹಿಂಸೆ ಕಾಯಿದೆ-2005ರಡಿಯಲ್ಲಿ ಮಹಿಳೆಯರಿಗೆ ನೀಡುತ್ತಿರುವ ರಕ್ಷಣೆ ಬಗ್ಗೆ ಉತ್ತರಿಸಿದ ಸಚಿವೆ, ರಾಜ್ಯಗಳಿಂದ, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಪೊಲೀಸರಿಂದ ಕಾಲಕಾಲಕ್ಕೆ ನಾವು ವರದಿ ಪಡೆಯುತ್ತಿದ್ದೇವೆ. ತೊಂದರೆಯಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲು ಸಖಿ ಎಂಬ ಕೇಂದ್ರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ವೈಭವೀಕರಣ:ಮಾಧ್ಯಮಗಳು ಮಹಿಳೆಯರ ವಿಷಯಗಳಲ್ಲಿ ತುಂಬಾ ಸಂವೇದನಶೀಲವಾಗಿವೆ. ಕೆಲವೊಮ್ಮೆ ಮಾಧ್ಯಮಗಳು ಮಹಿಳೆಯರ ವಿರುದ್ಧದ ಹಿಂಸೆಯ ಒಂದು ಮುಖವನ್ನು ಮಾತ್ರ ವೈಭವೀಕರಿಸುತ್ತದೆ. ಇದರಿಂದ ಭಾರತದಲ್ಲಿ ಮಹಿಳೆಯರ ಬಗ್ಗೆ ಕಾಳಜಿಯಿಲ್ಲ ಎಂಬ ಭಾವನೆ ಬೇರೆ ದೇಶದವರಲ್ಲಿ ಹುಟ್ಟಿಕೊಳ್ಳುತ್ತದೆ. ಮಾಧ್ಯಮದ ವರದಿಗಳು ಕೆಲವು ಕಾನೂನುಗಳು ಮತ್ತು ಸಾರ್ವಜನಿಕ ಜಾಗೃತಿಗೆ ಕಾರಣವಾಗುತ್ತದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಪೋಷಕರ ಮಕ್ಕಳಿಗೆ ಅನುಕೂಲವಾಗುವ ಕೇಂದ್ರ ಸರ್ಕಾರದ ಆರ್ ಟಿಇ ಕಾಯ್ದೆ ಬಗ್ಗೆ ಉತ್ತರಿಸಿದ ಸಚಿವೆ, ಹಿಂದುಳಿದ ಮಕ್ಕಳಿಗೂ ಉತ್ತಮ ಶಾಲೆಗಳಲ್ಲಿ ಶಿಕ್ಷಣ ದೊರಕುವಂತಾದರೆ ಒಳ್ಳೆಯದೇ. ಪ್ರತಿ ಏಳು ನಿಮಿಷದವರೆಗೆ ಭಾರತಕ್ಕೆ ಉತ್ತಮ ಶಾಲೆಯ ಅಗತ್ಯವಿದೆ ಎಂದರು.
#100 ಮಹಿಳೆ ಅಭಿಯಾನದ ಬಗ್ಗೆ ಉತ್ತರಿಸಿದ ಅವರು, ನಮ್ಮ ಜೀವನದಲ್ಲಿ, ನಮ್ಮ ಸುತ್ತಮುತ್ತ ಬದಲಾವಣೆ ತಂದ ಮಹಿಳೆಯರ ಬಗ್ಗೆ ತಿಳಿದಿದ್ದರೆ ಈ ಅಭಿಯಾನದಲ್ಲಿ ಭಾಗವಹಿಸಬಹುದು. ಮಹಿಳಾ ಸಚಿವಾಲಯದ ಫೇಸ್ ಬುಕ್ ಪುಟದಲ್ಲಿ ತಮ್ಮ ಹೆಸರನ್ನು ಸೆಪ್ಟೆಂಬರ್ 30ರೊಳಗೆ ನೋಂದಾಯಿಸಿಕೊಳ್ಳಬಹುದು. ಯಾರಿಗೆ ಹೆಚ್ಚು ಶಿಫಾರಸ್ಸುಗಳು ಬರುತ್ತವೆಯೋ ಅವರ ಹೆಸರನ್ನು ಅಂತಿಮಗೊಳಿಸಿ ತೀರ್ಪುಗಾರರ ಮುಂದಿಡಲಾಗುವುದು. ಅವರಲ್ಲಿ 100 ಮಹಿಳೆಯರನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಗೊಂಡ ಮಹಿಳೆಯರಿಗೆ ಪ್ರಧಾನ ಮಂತ್ರಿಯವರು 'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆ ಆರಂಭಿಸಿದ ದಿನವಾದ ಜನವರಿ 22ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸನ್ಮಾನಿಸಲಿದ್ದಾರೆ ಎಂದು ಸಚಿವೆ ಮನೇಕಾ ಗಾಂಧಿ ತಿಳಿಸಿದರು.