ಸಬ್ ಇನ್‌ಸ್ಪೆಕ್ಟರ್ ಅನೈತಿಕ ವರ್ತನೆ
ಲಖನೌ: ಒಪ್ಪತ್ತು ಊಟಕ್ಕಾಗಿ ರಸ್ತೆಬದಿಯಲ್ಲಿ ಟೈಪ್ ರೈಟರ್ ಇಟ್ಟುಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಿದ್ದ ಹಿರಿಯ ನಾಗರಿಕರೊಬ್ಬರ ಮೇಲೆ ಉತ್ತರ ಪ್ರದೇಶದ ಪೊಲೀಸರು ತಮ್ಮ ಪ್ರತಾಪ್ ತೋರಿಸಿದ್ದು, ಟೈಪ್ ರೈಟರನ್ನು ಹೊಡೆದು ಹಾಕಿದ್ದಾರೆ.
ದುಡಿಮೆಗಿದ್ದ ಏಕೈಕ ಮಾರ್ಗವನ್ನು ಕಳೆದುಕೊಂಡಿದ್ದ ಹಿರಿಯ ಜೀವ ತಲ್ಲಣಿಸಿ ಹೋಗಿದ್ದರು. ದಾಳಿ ಸಂದರ್ಭದಲ್ಲಿ ಸ್ಥಳದಲ್ಲಿದ್ದವರೊಬ್ಬರು ಮೊಬೈಲ್ಫೋನ್ನಲ್ಲಿ ಪೊಲೀಸ್ ಪ್ರತಾಪವನ್ನು ವಿಡಿಯೋ ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣಕ್ಕೆ ಅಳವಡಿಸಿದ್ದರು. ಈ ವಿಡಿಯೋವನ್ನು ನೋಡಿದ ಜನರು ಉತ್ತರ ಪ್ರದೇಶದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
65 ವರ್ಷದ ಕೃಷ್ಣಕುಮಾರ್ ಹಲವಾರು ವರ್ಷಗಳಿಂದ ಹಳೆಯದಾದ ಟೈಪ್ರೈಟರ್ ಹಿಡಿದುಕೊಂಡು ಲಕನೌನ ಪ್ರಧಾನ ಅಂಚೆ ಕಚೇರಿ ಬಳಿಯ ಪಾದಚಾರಿ ಮಾರ್ಗದಲ್ಲಿ ಕುಳಿತು ತಮ್ಮ ಬಳಿ ಬರುತ್ತಿದ್ದ ಗ್ರಾಹಕರ ಕಾಗದಪತ್ರಗಳನ್ನು ಟೈಪ್ ಮಾಡಿಕೊಡುತ್ತಿದ್ದರು. ಸಿಗುತ್ತಿದ್ದ ಪುಡಿಗಾಸಿನಲ್ಲೇ ಅವರು ಕಳೆದ 35 ವರ್ಷಗಳಿಂದ ಸ್ವಾಲಂಬನೆಯ ಜೀವನ ನಡೆಸುತ್ತಿದ್ದರು. ಹಫ್ತಾ ಕೊಡುವಂತೆ ಪೊಲೀಸ್ ಸಬ್ಇನ್ಸ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಒತ್ತಾಯಿಸುತ್ತಿದ್ದರು. ಇದಕ್ಕೆ ಕೃಷ್ಣಕುಮಾರ್ ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತದೆ ಎಂಬ ನೆಪದಲ್ಲಿ ಬಂದ ಪ್ರದೀಪ್ ಕುಮಾರ್ ಏಕಾಏಕಿ ಕೃಷ್ಣಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಜತೆಗೆ ಅವರ ಬಳಿಯಿದ್ದ ಟೈಪ್ರೈಟರ್ ಅನ್ನು ಎತ್ತಿ ನೆಲಕ್ಕೆ ಕುಕ್ಕಿ ಪುಡಿಪುಡಿ ಮಾಡಿದ್ದರು.
ಎಸ್ಐ ಪ್ರದೀಪ್ ಕುಮಾರ್ ಅಮಾನತು
ಎಸ್ಐ ಪ್ರದೀಪ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಜತೆಗೆ ಹೊಸದಾದ 2 ಟೈಪ್ರೈಟರ್ಗಳನ್ನು ಖರೀದಿಸಿ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವರ ಮೂಲಕ ಕೃಷ್ಣಕುಮಾರ್ ಅವರ ಮನೆಬಾಗಿಲಿಗೆ ಅವುಗಳನ್ನು ತಲುಪಿಸಿ, ಮಾನವೀಯತೆ ಮೆರೆದರು. ಅಲ್ಲದೆ, ಜಿಲ್ಲಾಧಿಕಾರಿ ಕಚೇರಿ ಅಥವಾ ಇನ್ನಾವುದೇ ಸರ್ಕಾರಿ ಕಚೇರಿಯ ಸುತ್ತಮುತ್ತ ಸೂಕ್ತ ಸ್ಥಳವನ್ನು ಹುಡುಕಿ ಟೈಪ್ರೈಟರ್ ಅಂಗಡಿ ಇಟ್ಟುಕೊಳ್ಳಲು ಕೃಷ್ಣಕುಮಾರ್ ಅವರಿಗೆ ನೆರವಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.