ಪಾಟ್ನಾ: ಮೀಸಲಾತಿ ನಿಯಮವನ್ನು ಪರಾಮರ್ಶಿಸಬೇಕೆಂದು ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ನೀಡಿರುವ ಬೆನ್ನಲ್ಲೇ ಮೀಸಲಾತಿಯನ್ನು ಅಂತ್ಯಗೊಳಿಸುವಂತೆ ಬಿಜೆಪಿ, ಆರ್ ಎಸ್ಎಸ್ ಗೆ ಲಾಲು ಪ್ರಸಾದ್ ಯಾದವ್ ಸವಾಲು ಹಾಕಿದ್ದಾರೆ.
ಟ್ವಿಟರ್ ನಲ್ಲಿ ಬರೆದಿರುವ ಲಾಲು ಪ್ರಸಾದ್, ಬಿಜೆಪಿ, ಆರ್.ಎಸ್ಎಸ್ ಮೀಸಲಾತಿಯನ್ನು ಅಂತ್ಯಗೊಳಿಸುವ ಸವಾಲು ಸ್ವೀಕರಿಸಲಿ ಎಂದು ತಿಳಿಸಿದ್ದಾರೆ. ದೇಶದಲ್ಲಿ ದಲಿತರು ಹಾಗು ಹಿಂದುಳಿದ ವರ್ಗದವರೇ ಹೆಚ್ಚಿದ್ದಾರೆ, ಮೀಸಲಾತಿ ಹಿಂಪಡೆಯಲು ಮುಂದಾದರೆ ಹೋರಾಟ ನಡೆಸುತ್ತಾರೆ ಎಂದು ಲಾಲು ಪ್ರಸಾದ್ ಎಚ್ಚರಿಸಿದ್ದಾರೆ.
ಆರ್.ಎಸ್ಎಸ್ ಮೀಸಲಾತಿಯನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡುತ್ತಿದ್ದರೆ, ನಾವು ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಲಾಲು ಪ್ರಸಾದ್ ಹೇಳಿದ್ದಾರೆ. ಮೀಸಲಾತಿ ನಿಯಮವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಮೀಸಲಾತಿ ಯಾರಿಗೆ ಅಗತ್ಯವಿದೆ ಮತ್ತು ಎಷ್ಟು ಕಾಲದವರೆಗೆ ಎಂದು ಪರೀಕ್ಷಿಸಲು ರಾಜಕಿಯೇತರ ಸಮಿತಿಯನ್ನು ಸ್ಥಾಪಿಸಬೇಕು ಮೋಹನ್ ಭಾಗವತ್ ಹೇಳಿದ್ದರು.