ದೇಶ

ರಾಷ್ಟ್ರಧ್ವಜದ ಮೇಲೆ ಸಹಿ; ಧ್ವಜ ಸಂಹಿತೆ ಉಲ್ಲಂಘನೆ ಮಾಡಿದ ಮೋದಿ?

Rashmi Kasaragodu
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ರಾಷ್ಟ್ರಧ್ವಜದ ಮೇಲೆ ಸಹಿ ಹಾಕಿರುವುದು ಇದೀಗ ಚರ್ಚೆಗಾಸ್ಪದವಾಗಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪ್ರಧಾನಿ ಮೋದಿ ಸಹಿ ಹಾಕಿದ ರಾಷ್ಟ್ರಧ್ವಜವನ್ನು ಉಡುಗೊರೆಯಾಗಿ ನೀಡಲಿದ್ದು, ಖ್ಯಾತ ಬಾಣಸಿಗ ವಿಕಾಸ್ ಖನ್ನಾ ಮೋದಿಯವರ ಉಡುಗೊರೆಯನ್ನು ಒಬಾಮಾ ಅವರಿಗೆ ತಲುಪಿಸಲಿದ್ದಾರೆ.
ನಾನು ಒಬಾಮಾ ಅವರನ್ನು ಭೇಟಿ ಮಾಡಲಿದ್ದು, ಮೋದಿಯವರು ಸಹಿ ಹಾಕಿದ ರಾಷ್ಟ್ರಧ್ವಜವನ್ನು ನಾನು ಒಬಾಮಾ ಅವರಿಗೆ ನೀಡಲಿದ್ದೇನೆ ಎಂದು ವಿಕಾಸ್ ಖನ್ನಾ ಹೇಳಿದ್ದಾರೆ.
ಆದಾಗ್ಯೂ, ಒಂದು ರಾಷ್ಟ್ರದ ಧ್ವಜವನ್ನು ಇನ್ನೊಬ್ಬರಿಗೆ ನೀಡುವುದು ಗೌರವದ ಸಂಕೇತ ಎಂದೇ ಪರಿಗಣಿಸಲ್ಪಡುತ್ತದೆ. ಆದರೆ ರಾಷ್ಟ್ರಧ್ವಜದ ಮೇಲೆ ಸಹಿ ಹಾಕುವ ಮೂಲಕ ಮೋದಿ ಧ್ವಜ ಸಂಹಿತೆಯನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನವೆಸಗಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.
ಧ್ವಜ ಸಂಹಿತೆಯಲ್ಲಿ ಏನಿದೆ? : ಭಾರತದ ಧ್ವಜ ಸಂಹಿತೆ, 2002, ಭಾಗ 2, ಸೆಕ್ಷನ್ 3, ವಿವರಣೆ 4, ಪಾಯಿಂಟ್ (ಎಫ್) ನಲ್ಲಿ ಉಲ್ಲೇಖಿಸಿರುವ ಹಾಗೆ, ರಾಷ್ಟ್ರಧ್ವಜದ ಮೇಲೆ ಯಾವುದೇ ರೀತಿಯ ಬರಹವನ್ನು ನಮೂದಿಸುವುದು ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದಂತೆ ಎಂದು ಹೇಳಲಾಗಿದೆ.
ಭಾರತದ ಧ್ವಜ ಸಂಹಿತೆ, 2002, ಭಾಗ 2, ಸೆಕ್ಷನ್ 1, 2.1ಸಬ್ ಸೆಟ್ (4) ಪ್ರಕಾರ ರಾಷ್ಟ್ರಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯುವಂತಿಲ್ಲ.
ಕಾಯ್ದೆ ಏನು ಹೇಳುತ್ತಿದೆ?
ರಾಷ್ಟ್ರ್ಟ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971 ರ ಪ್ರಕಾರ, ಯಾವುದೇ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲಿ  ಅಥವಾ ಸಾರ್ವಜನಿಕರಿಗೆ ಕಾಣುವ ಹಾಗೆ ಭಾರತದ ರಾಷ್ಟ್ರಧ್ವಜವನ್ನು  ಸುಟ್ಟರೆ,  ತುಂಡರಿಸಿದರೆ,ವಿರೂಪಗೊಳಿಸಿದರೆ, ಅಪಮಾನಗೊಳಿಸಿದರೆ, ವಿಕೃತ ಮಾಡಿದರೆ, ನಾಶ ಮಾಡಿದರೆ, ತುಳಿದರೆ ಅಥವಾ ವಾಕ್, ಬರಹ ಮತ್ತು ಕ್ರಿಯೆಗಳ ಮೂಲಕ ಯಾವುದೇ ರೀತಿಯಲ್ಲಿ ಅವಮಾನ ಮಾಡಿದರೆ ಅಂಥವರಿಗೆ 3 ವರ್ಷ ಸಜೆ ಅಥವಾ ದಂಡ, ಇಲ್ಲವೇ ದಂಡ ಮತ್ತು ಸಜೆಯನ್ನು ವಿಧಿಸಲಾಗುವುದು.
SCROLL FOR NEXT