ನವದೆಹಲಿ: ದಶಕಗಳಿಂದ ಕುಂಟುತ್ತಾ ಸಾಗಿದ್ದ ಬೆಂಗಳೂರು-ಮೈಸೂರು ರೈಲು ಜೋಡಿ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು ಜನವರಿಯಲ್ಲಿ ಬಳಕೆಗೆ ಲಭ್ಯವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಈ ವಿಷಯ ತಿಳಿಸಿದ್ದಾರೆ. ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಗಾರ ಸ್ಥಳಾಂತರಕ್ಕೆ
ಇದ್ದ ಅಡೆತಡೆಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಈಗ ಶಸ್ತ್ರಾಗಾರ ತೆರವುಗೊಳಿಸಿ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸಚಿವ ಸುರೇಶ್ ಪ್ರಭು ಅವರೇ ಜೋಡಿ ಮಾರ್ಗ ಉದ್ಘಾಟಿಸುವ ನಿರೀಕ್ಷೆ ಇದೆ. ಮೈಸೂರು ರೈಲ್ವೆ ನಿಲ್ದಾಣದಿಂದ ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ 138 ಕಿ.ಮೀ. ದೂರವಿದೆ. ಈ ಅಂತರ ಕ್ರಮಿಸಲು ನಾನ್‍ಸ್ಟಾಪ್ ರೈಲುಗಳು 3 ತಾಸು,ಎಕ್ಸ್‍ಪ್ರೆಸ್ ರೈಲುಗಳು 3 ತಾಸು 30 ನಿಮಿಷ ತೆಗೆದುಕೊಳ್ಳುತ್ತವೆ. ಪ್ಯಾಸೆಂಜರ್ ರೈಲುಗಳಿಗೆ 4 ತಾಸು ಬೇಕು. ಜೋಡಿ ಮಾರ್ಗ ಪೂರ್ಣ ಗೊಂಡ ನಂತರ ನಾನ್‍ಸ್ಟಾಪ್ ಎಕ್ಸ್ ಪ್ರೆಸ್‍ಗಳು 2ತಾಸು 15 ನಿಮಿಷಕ್ಕೆ ಈ ದೂರ ಕ್ರಮಿಸಲಿವೆ.
ಯಾದಗಿರಿಯಲ್ಲಿ ಕಾರ್ಖಾನೆ: ಯಾದಗಿರಿಯಲ್ಲಿ ರೈಲ್ವೆ ಬೋಗಿ ನಿರ್ಮಾಣ ಕಾರ್ಖಾನೆ ಸ್ಥಾಪಿಸಲು ತ್ವರಿತ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈಲ್ವೆ ಸಚಿವ ಸುರೇಶ್‍ಪ್ರಭು ಅವರಿಗೆ ಮನವಿ ಮಾಡಿದರು. ಬೆಂಗಳೂರು ಸಬ್‍ಅರ್ಬನ್ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನ ಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ರೈಲ್ವೆ ಸಚಿವ ಸುರೇಶ್‍ಪ್ರಭು ಸೂಕ್ತ ಕ್ರಮಕೈಗೊಳ್ಳುವು ದಾಗಿ ಭರವಸೆ ನೀಡಿದ್ದಾರೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸಲು ಹೆಚ್ಚಿನ ಗೂಡ್ಸ್ಬೋ ಗಿಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಸಕಲೇ-ಶಪುರ-ಹಾಸನ ನಡುವೆ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ರಾಜ್ಯಸರ್ಕಾರ ಶೇ.50ರಷ್ಟು ವೆಚ್ಚ ಭರಿಸಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.