ದೇಶ

ಬಿಜೆಪಿ ಸಂಸದನ ನಂತರ, ನಜೀಬ್ ಜಂಗ್ ವಜಾಕ್ಕೆ ಕಾಂಗ್ರೆಸ್ ಆಗ್ರಹ

Lingaraj Badiger

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದ್ದು, ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

'ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು ಲೆಫ್ಟಿನೆಂಟ್ ಗವರ್ನರ್ ಸಂಪೂರ್ಣ ದುರ್ಬಲಗೊಳಿಸುತ್ತಿದ್ದಾರೆ ಮತ್ತು ಅವರು ಕೇಂದ್ರ ಸರ್ಕಾರದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ಮನಿಶ್ ತಿವಾರಿ ಅವರು ಆರೋಪಿಸಿದ್ದಾರೆ.

'ಆ ಹುದ್ದೆಗೆ ಅವರು ಅರ್ಹ ವ್ಯಕ್ತಿಯಲ್ಲ. ಅದಷ್ಟು ಬೇಗ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ನಜೀಬ್ ಜಂಗ್ ಅವರನ್ನು ವಜಾಗೊಳಿಸಬೇಕು' ಎಂದು ತಿವಾರಿ ಒತ್ತಾಯಿಸಿದ್ದಾರೆ.

ಇದಕ್ಕು ಮುನ್ನ, ಬಿಜೆಪಿ ಸಂಸದ ಉದಿತ್ ರಾಜ್ ಅವರು ನಜೀಬ್ ಜಂಗ್ ಅವರು 'ಸೂಪರ್ ಜಂಗ್‌' ರೀತಿ ವರ್ತಿಸುತ್ತಿದ್ದು, ಅವರನ್ನು ವಜಾಗೊಳಿಸಬೇಕು ಎಂದಿದ್ದರು.

ಈಶಾನ್ಯ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುವಾರ ರಾಜ್ ಬೆಂಬಲಿಗರನ್ನು ಬಂಧಿಸಲಾಗಿತ್ತು. ಈ ಘಟನೆ ಬಳಿಕ ಜಂಗ್ ಸೂಪರ್ ಕಿಂಗ್ ರೀತಿ ವರ್ತಿಸುತ್ತಿದ್ದು, ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದಿದ್ದರು. ಅಲ್ಲದೆ ಈ ಸಂಬಂಧ ತಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದರು.

SCROLL FOR NEXT