ನ್ಯೂಯಾರ್ಕ್: ಅಮೆರಿಕದ ಸಿಇಒಗಳ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ಮೋದಿ, ಭಾರತದಲ್ಲಿ ಬಂಡವಾಳ ಹೂಡಿಕೆಗೆ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ.
ಭಾರತದಲ್ಲಿ ಉದ್ಯಮ ಸ್ನೇಹಿ ಅವಕಾಶಗಳ ಕೊರತೆ ಬಗೆಗಿನ ಸಿಇಒಗಳ ಕಳವಳಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ``ನೀವು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ. ಆಡಳಿತದಲ್ಲಿ ಸುಧಾರಣೆಯೇ ನಮ್ಮ ಮೂಲ ಮಂತ್ರ. ಉದ್ದಿಮೆ ವಲಯದ ಪ್ರಕ್ರಿಯೆಗಳನ್ನು ಸರಳ ಗೊಳಿಸುತ್ತೇವೆ, ನಿರ್ಧಾರ ಕೈಗೊಳ್ಳುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತ್ವರಿತಗೊಳಿಸುತ್ತೇವೆ'' ಎಂದರು. ಜತೆಗೆ, ವಿಶ್ವಾದ್ಯಂತ ವಿದೇಶಿ ನೇರ ಬಂಡವಾಳ ಪ್ರಮಾಣ ತಗ್ಗಿದೆ. ಆದರೆ, ಭಾರತದಲ್ಲಿ ಇದು ಶೇ.40ರಷ್ಟು ಹೆಚ್ಚಿದೆ. ಇದು ಭಾರತದ ಆರ್ಥಿಕತೆ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದೂ ಹೇಳಿದರು.
ಮೂಲಭೂತವಾಗಿ ನಾನು ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಖಾಸಗಿ ವಲಯವು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಂಡು ಅಭಿವೃದ್ಧಿ ಹೊಂದಬೇಕು ಎಂದೂ ಅವರು ಅಭಿಪ್ರಾಯ ಪಟ್ಟರು. ಇದೇ ವೇಳೆ, ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಿಕೆ, ಸುಧಾರಣೆ ಮತ್ತು ತೆರಿಗೆ ಆಡಳಿತದಲ್ಲಿ ಸುಸಂಗತತೆ ತರಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪುಟವನ್ನು ಸಿಇಒಗಳಿಗೆ ಪ್ರಧಾನಿ ವಿತರಿಸಿದರು.
ಮೋದಿ ಮಹತ್ವಾಕಾಂಕ್ಷೆಗೆ ಜೈ
ಪ್ರಧಾನಿ ಮಾತುಗಳನ್ನು ಕೇಳಿ ಫಿದಾ ಆದ `4.5 ಲಕ್ಷಕೋಟಿ ಡಾಲರ್ ಕ್ಲಬ್'(ಎಲ್ಲ 42 ಸಿಇಒಗಳ ಒಟ್ಟು ಆಸ್ತಿಯ ಅಂದಾಜು ಮೌಲ್ಯ), ``ಯೂ ಆರ್ ಡೂಯಿಂಗ್ ಜಸ್ಟ್ಫೈನ್'' ಎನ್ನುವ ಮೂಲಕ ಕಳೆದ 15 ತಿಂಗಳಲ್ಲಿ ಮೋದಿ ಮಾಡಿದ ಸಾಧನೆ ಗಳನ್ನು ಶ್ಲಾಘಿಸಿದರು. ನೀವೇನು ಮಾಡುತ್ತಿದ್ದೀರೋ, ಅದನ್ನು ಮುಂದುವರಿಸಿ ಎಂದರು. ಅಲ್ಲದೆ, ಮೇಕ್ ಇನ್ ಇಂಡಿಯಾ, ಕೌಶಲ ಭಾರತ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
4ಜಿ ನೆಟ್‍ವರ್ಕ್ ವಿಸ್ತರಣೆ ಶೀಘ್ರವಾಗಲಿ: ಪ್ರಧಾನಿ ಮೋದಿ
ಅವರನ್ನು ಭೇಟಿಯಾದ ಅಮೆರಿಕದ ಮಾಧ್ಯಮ ಮತ್ತು ಮನರಂಜನಾ ವಲಯದ ಪ್ರಮುಖರು, ಭಾರತದಲ್ಲಿ 4ಜಿ ನೆಟ್‍ವರ್ಕ್ ವಿಸ್ತರಣೆ, ಟಿವಿ ಡಿಜಿಟಲೀಕರಣ ಶೀಘ್ರವಾಗಿ ಆಗಲಿ ಎಂದು ಕೇಳಿಕೊಂಡಿದ್ದಾರೆ. ಜತೆಗೆ, ಭಾರತದಲ್ಲಿ ಸಂವಹನ ವಿವಿ ಸ್ಥಾಪನೆ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಭಾರತವು ನಮಗೆ ಅತಿದೊಡ್ಡ ಅವಕಾಶವೂ ಹೌದು, ಅತಿದೊಡ್ಡ ಸವಾಲೂ ಹೌದು ಎಂದ ಅವರು, ಭಾರತದ ಭವಿಷ್ಯದ ಬಗ್ಗೆ ನಾವು ಸಾಕಷ್ಟು ಆಶಾವಾದ ಇಟ್ಟು ಕೊಂಡಿದ್ದೇವೆ ಎಂದೂ ಹೇಳಿದ್ದಾರೆ.
ಬಿಸಿಬೇಳೆ ಬಾತ್‍ನ ಘಮ
ಸಿಇಒಗಳಿಗಾಗಿ ಮೋದಿ ಏರ್ಪಡಿಸಿದ್ದ ಔತಣಕೂಟ ದಲ್ಲಿ ಕರ್ನಾಟಕದ ಬಿಸಿಬೇಳೆ ಬಾತ್, ಕೊಬ್ಬರಿ ಚಟ್ನಿ, ಗುಜರಾತ್‍ನ ಕಾರ್ನ್ ಧೋಕ್ಲಾ, ಕಾಶ್ಮೀರಿ ಕಹ್ವಾ ಸೇರಿ ಭಾರತದ ವಿವಿಧ ಪ್ರದೇಶಗಳ ವಿಭಿನ್ನ ಖಾದ್ಯಗಳನ್ನು ಇಡಲಾಗಿತ್ತು. ಸ್ಟಾರ್ ಶೆಫ್ ವಿಕಾಸ್ ಖನ್ನಾ ಅವರೇ ಸ್ವತಃ 50 ಸಿಇಒಗಳಿಗೆ 5 ಕೋರ್ಸ್‍ನ ಔತಣವನ್ನು ಬಡಿಸಿದರು. ಕಡೆಗೆ ``ಗುಡ್ ವಿಕಾಸ್ ಖನ್ನಾ'' ಎಂದು ಹೇಳಲು ಮೋದಿ ಮರೆಯಲಿಲ್ಲ.
ಬಡತನ ನಿರ್ಮೂಲನೆಯೇ ಧ್ಯೇಯವಾಗಲಿ
ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿ ವಿಶ್ವಸಂಸ್ಥೆಯಲ್ಲಿ ನಡೆದ ಉನ್ನತ ಮಟ್ಟದ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾತನಾಡಿದರು. ಶೃಂಗದಲ್ಲಿ ಆರಂಭಿಕ ಭಾಷಣದ ಬಳಿ 17 ಗುರಿಗಳು ಮತ್ತು 169 ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡ `ನಮ್ಮ ಜಗತ್ತಿನ ಬದಲಾವಣೆ: ಸುಸ್ಥಿರ ಅಭಿವೃದ್ಧಿಗಾಗಿ 2030 ಅಜೆಂಡಾ' ನಿರ್ಣಯವನ್ನು ಅಂಗೀಕರಿಸಲಾಯಿತು.
ಪ್ರಧಾನಿ ಹೇಳಿದ್ದೇನು?
- ಜಗತ್ತಿನಿಂದ ಬಡತನವನ್ನು ನಿರ್ಮೂಲನೆ ಮಾಡಬೇಕಾದ್ದು ನಮ್ಮ ಕರ್ತವ್ಯ
- ಈ ನಿಟ್ಟಿನಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಪಾತ್ರ ಮಹತ್ವದ್ದು
- ಬಡ ದೇಶಗಳ ನೆರವಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮುಂದೆ ಬರಲಿ
- ಜಗತ್ತಿನ ಭವಿಷ್ಯಕ್ಕೆ ಅಜೆಂಡಾ 2030 ಅತ್ಯಂತ ಮಹತ್ವದ್ದು
- ನಾವು ಇಡೀ ಜಗತ್ತನ್ನು ಒಂದೇ ಕುಟುಂಬದಂತೆ ಕಾಣಬೇಕು
- ಬಡತನದ ಬಗ್ಗೆ ಅಂದೇ ಮಹಾತ್ಮ ಗಾಂಧಿ ನುಡಿದಿದ್ದರು
- ಆದರೆ, ನಾವದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
- ಇಂದು ನಾವೆಲ್ಲರೂ ಮಾನವನ ಭವಿಷ್ಯ ನಿರ್ಧರಿಸಲೆಂದು ಇಲ್ಲಿ ಸೇರಿದ್ದೇವೆ
- ನಮ್ಮ ಎಲ್ಲ ನಗರಗಳೂ ಸ್ಮಾರ್ಟ್ ಮತ್ತು ಸುಸ್ಥಿರವಾಗಬೇಕು
- ನಮ್ಮದು ಭೂಮಿಯನ್ನು ತಾಯಿಯೆಂದು ಪರಿಗಣಿಸುವ ಸಂಸ್ಕೃತಿ
- ಎಲ್ಲರೂ ಸುರಕ್ಷಿತರೆಂದು ಭಾವಿಸುವ ಜಗತ್ತನ್ನು ನಾವು ಸೃಷ್ಟಿಸಬೇಕು