ದೇಶ

ಸರ್ಕಾರಿ ಬಂಗ್ಲೆ ತೆರವುಗೊಳಿಸುವಂತೆ ವೀರಭದ್ರ ಸಿಂಗ್, ಫಾರೂಖ್ ಅಬ್ದುಲ್ಲಾಗೆ ಕೇಂದ್ರ ಸೂಚನೆ

Lingaraj Badiger

ನವದೆಹಲಿ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್, ಮಾಜಿ ಕೇಂದ್ರ ಸಚಿವ ಫಾರೂಖ್ ಅಬ್ದುಲ್ಲಾ ಹಾಗೂ ಕಾಂಗ್ರೆಸ್ ನಾಯಕ ದಿ.ಅರ್ಜುನ್ ಸಿಂಗ್ ಅವರ ಪತ್ನಿಗೆ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ವೀರಭದ್ರ ಸಿಂಗ್ ಅವರಿಗೆ ಮಂಜೂರು ಮಾಡಿದ್ದ ಮನೆಯನ್ನು ಕಳೆದ ಏಪ್ರಿಲ್‌ನಲ್ಲಿ ವಸತಿ ಕುರಿತ ಸಂಪುಟ ಸಮಿತಿ(ಸಿಸಿಎ) ರದ್ದುಗೊಳಿಸಿತ್ತು. ಆದರೂ ಸಿಂಗ್ ಮನೆ ಖಾಲಿ ಮಾಡಿರಲಿಲ್ಲ. ಹೀಗಾಗಿ ನಗರಾಭಿವೃದ್ಧಿ ಸಚಿವಾಲಯ ಈಗ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ.

ನಗರಾಭಿವೃದ್ದಿ ಸಚಿವಾಲಯದ ಹಿರಿಯ ಅಧಿಕಾರಿಯ ಪ್ರಕಾರ, ಈ ಸಂಬಂಧ ವೀರಭದ್ರ ಸಿಂಗ್ ಅವರು ಎಸ್ಟೇಟ್ಸ್ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದು, ಬಂಗಲೆಯಲ್ಲಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರು 2011ರಲ್ಲಿ ಮೃತಪಟ್ಟ ನಂತರ ಅವರ ಪತ್ನಿ ಸರೋಜ್ ಅವರಿಗೆ 2016ರವರೆಗೆ ಸರ್ಕಾರಿ ಬಂಗಲೆಯಲ್ಲಿ ಮುಂದುವರೆಯಲು ಅವಕಾಶ ನೀಡಲಾಗಿತ್ತು. ಆದರೆ ಎನ್‌ಡಿಎ ಸರ್ಕಾರ ಅದನ್ನು ರದ್ದುಗೊಳಿಸಿ ಈಗ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ.

SCROLL FOR NEXT