ನವದೆಹಲಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಆರ್ ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಮಾರ್ಶೆಯಲ್ಲಿನ ರೆಪೋ ದರ ಕಡಿತ ಮಾಡುವ ಮೂಲಕ ಬಿಜೆಪಿ ಪಕ್ಷ ತನ್ನ ಅತಿ ದೊಡ್ಡ ಆಶ್ವಾಸನೆಯನ್ನು ಈಡೇರಿಸಿದೆ ಎಂದು ಹೇಳಿದೆ.
ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ರಘುರಾಮ್ ರಾಜನ್ ಅವರು ದ್ವೈಮಾಸಿಕ ಹಣಕಾಸು ನೀತಿ ಪರಮಾರ್ಶೆಯನ್ನು ಪ್ರಕಟಿಸಿದ್ದು, ರೆಪೊ ದರವನ್ನು ಶೇ.0.5ರಷ್ಟು (50 ಬೇಸಿಸ್ ಪಾಯಿಂಟ್) ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಶೇ.4 ರಷ್ಟಿದ್ದ ಸಿ.ಆರ್.ಆರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವಾದರೂ, ಶೇ.7 .25 ರಷ್ಟಿದ್ದ ರೆಪೋದರ ರಿಸರ್ವ್ ಬ್ಯಾಂಕ್ ನೀತಿ ಪರಾಮರ್ಶೆ ನಂತರ ಶೇ.6 .75 ರಷ್ಟಾಗಿದ್ದು ವಾಹನ ಹಾಗೂ ಗೃಹ ಸಾಲ ದರ ಅಗ್ಗವಾಗಿದೆ. ಇದೇ ಕಾರಣದಿಂದಾಗಿ ನಕಾರಾತ್ಮಕ ವಹಿವಾಟಿನಿಂದಾಗಿ ಹಿನ್ನಡೆ ಅನುಭವಿಸಿದ್ದ ಮುಂಬೈ ಷೇರುಮಾರುಕಟ್ಟೆ ಕೂಡ ಚೇತರಿಕೆ ಕಂಡಿತ್ತು.
ಇದೀಗ ಆರ್ ಬಿಐ ರೆಪೋ ದರ ಕಡಿತ ವಿಚಾರವನ್ನು ಬಿಜೆಪಿ ತನ್ನ ಯಶಸ್ಸು ಎಂಬಂತೆ ಬಿಂಬಿಸಿಕೊಳ್ಳಲು ಮುಂದಾಗಿದ್ದು, ಕಡಿಮೆ ದರದ ಲೋನ್ ಗಳಿಗೆ ಅವಕಾಶ ಮಾಡಿಕೊಡುವ ಆಶ್ವಾಸನೆಯನ್ನು ಬಿಜೆಪಿ ಈಡೇರಿಸಿದೆ ಎಂದು ಹೇಳಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ರೆಪೋ ದರ ಕಡಿತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭಾರತ ಆರ್ಥಿಕ ಸ್ಥಿತಿ ಸುಧಾರಣೆಯಿಂದಾಗಿ ಇಂದು ರೆಪೋ ದರ ಕಡಿತವಾಗಿದೆ. ರೆಪೊ ದರ ಕಡಿತದಿಂದಾಗಿ ಇಎಂಐ (ಸಾಲದ ಮಾಸಿಕ ಕಂತು)ಗಳ ಮೇಲಿನ ಬಡ್ಡಿ ದರವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಅಲ್ಲದೆ ರಿಯಲ್ ಎಸ್ಟೇಟ್ ಉದ್ಯಮ ವಿಭಾಗಕ್ಕೆ ಉತ್ತೇಜನ ನೀಡಲಿದ್ದು, ಉಕ್ಕು ಮತ್ತು ಸಿಮೆಂಟ್ ಉದ್ಯಮಗಳು ಕೂಡ ಇದರ ಲಾಭ ಪಡೆಯಲಿವೆ ಎಂದು ಹೇಳಿದ್ದಾರೆ.
ಬಿಜೆಪಿಯ ಮತ್ತೋರ್ವ ಮುಖಂಡ ಮತ್ತು ಪಕ್ಷದ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಮಾತನಾಡಿ ಅಧಿಕಾರಕ್ಕೆ ಬಂದ ಬಳಿಕ ರೆಪೋ ದರ ಕಡಿತ ಮಾಡುವ ಮೂಲಕ ಬಿಜೆಪಿ ಸರ್ಕಾರ ಮತ್ತೊಂದು ದೊಡ್ಡ ಆಶ್ವಾಸನೆಯನ್ನು ಈಡೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ನೀತಿಗಳು ದೇಶದಲ್ಲಿ ಆರ್ಥಿಕ ಉತ್ತೇಜನಕ್ಕೆ ಸಹಕಾರಿಯಾಗಿದ್ದು, ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ ಮತ್ತು ಕಳೆದ ಕೆಲ ತಿಂಗಳುಗಳಿಂದ ಸ್ಥಿರವಾಗಿದೆ. ಇದೇ ಕಾರಣಕ್ಕಾಗಿ ರೆಪೋ ದರ ಕೂಡ ಕಡಿತಗೊಂಡಿದೆ ಎಂದು ಹೇಳಿದರು.