ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಂಗಳವಾರ ಬಡ್ಡಿ ದರವನ್ನು ಶೇ.0.50 ಕಡಿತಗೊಳಿಸಿರುವುದನ್ನು ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಸ್ವಾಗತಿಸಿದ್ದಾರೆ.
ಆರ್‌ಬಿಐ ರೆಪೋದರವನ್ನು ಶೇ.0 .5 ರಷ್ಟು(50 ಬೇಸಿಸ್ ಪಾಯಿಂಟ್) ಕಡಿಮೆ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಇದು ಈ ಹಿಂದೆಯೇ ಆಗಬೇಕಾಗಿತ್ತು. ಆದರೆ ಈಗಲಾದರೂ ಮಾಡಲಾಗಿರುವ ಈ ಕಡಿತದಿಂದ ಆರ್ಥಿಕ ಪುನಃಶ್ಚೇತನ ಉಂಟಾಗಲಿದೆ. ಮಾತ್ರವಲ್ಲದೆ ಕಡಿಮೆ ಬಡ್ಡಿದರದ ಯುಗ ಇದರೊಂದಿಗೆ ಆರಂಭಗೊಳ್ಳುವ ಸೂಚನೆ ಇದೆ ಎಂದು ಚಿದಂಬರಂ ಹೇಳಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರವು ಹಣಕಾಸು ಬುನಾದಿಯನ್ನು ಭದ್ರಪಡಿಸುವ ತನ್ನ ನಿಲುವಿಗೆ ಬದ್ಧವಾಗಿ ಮುಂದುವರಿದದ್ದೇ ಆದಲ್ಲಿ ಆರ್‌ಬಿಐ ಇನ್ನಷ್ಟು ನೀತಿ ನಿರ್ಧಾರಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ಎದುರು ನೋಡುತ್ತೇವೆ ಎಂದು ಚಿದಂಬರಂ ತಿಳಿಸಿದ್ದಾರೆ.