ನವದೆಹಲಿ: ಭಾರತದ ದೇವಾಲಯವೊಂದಕ್ಕೆ ಭೇಟಿ ನೀಡಿದ ನಂತರವೇ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಮಿಲೇನಿಯರ್ ಆದನೇ? ಹೀಗೊಂದು ಪ್ರಶ್ನೆ ಸಾಮಾಜಿಕ ತಾಣಗಳಲ್ಲಿ ಚರ್ಚಾ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಫೇಸ್‌ಬುಕ್‌ನ ಪ್ರಧಾನ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೂಕರ್‌ಬರ್ಗ್ ದೇವಾಲಯಕ್ಕೆ ಭೇಟಿ ನೀಡಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಹಲವು ವರ್ಷಗಳ ಹಿಂದೆ ತಾನು ಮತ್ತು ಆ್ಯಪಲ್ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ ಉತ್ತರಾಖಂಡ್‌ನಲ್ಲಿರುವ ದೇವಾಲಯವೊಂದಕ್ಕೆ ಭೇಟಿ ನೀಡಿದ್ದೆವು ಎಂದು ಜೂಕರ್‌ಬರ್ಗ್ ಮೋದಿಯವರಲ್ಲಿ ಹೇಳಿದ್ದರು.
ಹಿಮಾಲಯ ಶ್ರೇಣಿಯಲ್ಲಿರುವ ಒಂದು ದೇವಾಲಯಕ್ಕೆ ಜೂಕರ್‌ಬರ್ಗ್ ಭೇಟಿ ನೀಡಿದ್ದರು. ಆದರೆ ಆ ದೇಗುಲದ ಹೆಸರನ್ನು ಅವರು ಹೇಳಿಲ್ಲ. ಇದೀಗ ಜೂಕರ್‌ಬರ್ಗ್ ಭೇಟಿ ನೀಡಿದ ದೇವಾಲಯ ಯಾವುದಾಗಿರಬಹುದು ಎಂಬುದರ ಬಗ್ಗೆ ನೆಟಿಜನ್‌ಗಳು ಚರ್ಚೆ ನಡೆಸುತ್ತಿದ್ದಾರೆ.
ಫೇಸ್‌ಬುಗ್ ಈ ಹಂತಕ್ಕೆ ಬೆಳೆಯುವ ಮುನ್ನ ಅಂದರೆ 2008ರಲ್ಲಿ ಸ್ಟೀವ್ ಜಾಬ್‌ನ ಒತ್ತಾಯದ ಮೇರೆಗೆ ಜೂಕರ್ ಬರ್ಗ್ ಈ ದೇವಾಲಯ ಸಂದರ್ಶಿಸಿದ್ದರು. ಆ ವೇಳೆ ಫೇಸ್‌ಬುಕ್ ನಷ್ಟದಲ್ಲಿದ್ದು, ಅದನ್ನು ಮಾರಾಟ ಮಾಡುವ ಬಗ್ಗೆಯೂ ಯೋಚಿಸಿದ್ದರಂತೆ. ಆದಾಗ್ಯೂ, ಭಾರತದಲ್ಲಿರುವ ಆ ದೇವಾಲಯಕ್ಕೆ ಭೇಟಿ ನೀಡಿದ ನಂತರ ಜೂಕರ್ ಬರ್ಗ್‌ನ ಜೀವನದಲ್ಲಿ ಶುಕ್ರದೆಸೆ ಆರಂಭವಾಯಿತು ಎಂದು ಹೇಳಲಾಗುತ್ತಿದೆ.
ಹಾಗಾದರೆ ಆ ದೇವಾಲಯ ಯಾವುದು? ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.