ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂ ಕೆ ಪಕ್ಷ ಪುದುಚೆರಿ ವಿಧಾನಸಭಾ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಸಿಎಂ ಜಯಲಲಿತಾ ಹೇಳಿದ್ದಾರೆ.
ಮೇ.16 ರಂದು ನಡೆಯಲಿರುವ ಪುದುಚೆರಿ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಎಐಎಡಿಎಂಕೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ. 2011 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಉಭಯ ಪಕ್ಷಗಳ ಮೈತ್ರಿ ಚುನಾವಣೆಯನ್ನು ಗೆದ್ದಿತ್ತಾದರೂ ಮೈತ್ರಿ ಹೆಚ್ಚು ಕಾಲ ಉಳಿಯಲಿಲ್ಲ.
2011 ರ ಚುನಾವಣೆಯಲ್ಲಿ ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಎಐಎಡಿಎಂಕೆ 5 ಸ್ಥಾನಗಳನ್ನು ಗಳಿಸಿತ್ತು, ಎಐಎನ್ ಆರ್ ಸಿ ಪಕ್ಷ 15 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ 5 ಸೀಟುಗಳು, ಡಿಎಂಕೆ 2 , ಪಕ್ಷೇತರರ ಅಭ್ಯರ್ಥಿಗಳು ಒಂದು ಸ್ಥಾನ ಗಳಿಸಿದ್ದರು.