ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ ಉಗ್ರರು ತನ್ನದೇ ದೇಶದ ಪ್ರಜೆಗಳೆಂದು ಒಪ್ಪಿಕೊಂಡಿದ್ದ ಪಾಕಿಸ್ತಾನ ತನಿಖಾ ತಂಡ, ಪಾಕಿಸ್ತಾನಕ್ಕೆ ವಾಪಸ್ ತೆರಳುತ್ತಿದ್ದಂತೆಯೇ ತನ್ನ ವರಸೆ ಬದಲಿಸಿದೆ.
ದಾಳಿಯ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಪಾಕ್ ಜಂಟಿ ತನಿಖಾ ತಂಡ, ಪಠಾಣ್ ಕೋಟ್ ವಾಯು ನೆಲೆ ಮೇಲಿನ ಉಗ್ರರ ದಾಳಿ ಪ್ರಕರಣ ಪಾಕಿಸ್ತಾನದ ತೇಜೋವಧೆ ಮಾಡಲು ಭಾರತ ರೂಪಿಸಿದ ಯೋಜನೆ ಎಂದು ಹೇಳಿರುವುದಾಗಿ ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ವಾರ ಪಠಾಣ್ ಕೋಟ್ ವಾಯು ನೆಲೆಗೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಜಂಟಿ ತನಿಖಾ ತಂಡ, ಎನ್ಐಎ ನೀಡಿರುವ ಸಾಕ್ಷ್ಯಗಳು ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ಮಾಡುತ್ತಿರುವ ಆರೋಪಗಳನ್ನು ಒಪ್ಪುವುದಕ್ಕೆ ಪೂರಕವಾಗಿಲ್ಲ ಎಂದು ಹೇಳಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಪಠಾಣ್ ಕೋಟ್ ದಾಳಿಯನ್ನು ಭಾರತ ಸರ್ಕಾರ ಪಾಕಿಸ್ತಾನದ ತೇಜೋವಧೆಗೆ ಸಾಧನವಾಗಿ ಬಳಸಿಕೊಂಡಿದ್ದು, ದಾಳಿಗೆ ಕಾರಣವಾಗಿರುವವರ ಬಗ್ಗೆ ಭಾರತ ಸರ್ಕಾರ ಆರೋಪಿಸುತ್ತಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ತನಿಖಾ ತಂಡ ಹೇಳಿದೆಯಂತೆ. ಭಾರತದ ಅಧಿಕಾರಿಗಳಿಗೆ ದಾಳಿ ನಡೆಯುವುದಕ್ಕೂ ಮುನ್ನ ಅದರ ಬಗ್ಗೆ ಮಾಹಿತಿ ಇತ್ತು ಎಂದು ಪಠಾಣ್ ಕೋಟ್ ಗೆ ಭೇಟಿ ನೀಡಿದ್ದ ತನಿಖಾ ತಂಡ ವರದಿಯಲ್ಲಿ ಹೇಳಿದೆ.
ಜಂಟಿ ತನಿಖಾ ತಂಡ ಪಠಾಣ್ ಕೋಟ್ ದಾಳಿ ಕುರಿತ ವರದಿಯನ್ನು ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಗೆ ನೀಡಲಿದೆ. ಪಠಾಣ್ ಕೋಟ್ ವಾಯು ನೆಲೆಯಲ್ಲಿ ತನಿಖೆ ನಡೆಸಲು ಭಾರತ ಸರ್ಕಾರ ಸರಿಯಾದ ಸಹಕಾರ ನೀಡಲಿಲ್ಲ, ಬದಲಾಗಿ ತನಿಖೆಗೆ ಅಡಚಣೆ ಉಂಟು ಮಾಡಿತ್ತು ಎಂದು ತನಿಖಾ ತಂಡ ಆರೋಪಿಸಿದೆ.