ನವದೆಹಲಿ: ಮಹಾರಾಷ್ಟ್ರದಲ್ಲಿ ಉಂಟಾಗಿರುವ ಬರದ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿದ್ದು, ಬರ ಪೀಡಿತ ರಾಜ್ಯಗಳಿಗೆ ನೆರವು ನೀಡಲು ತೀರ್ಮಾನಿಸಿದೆ. ಹೀಗಾಗಿ ವಿಚಾರವನ್ನು ರಾಜಕೀಯ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರು, ಮಹಾರಾಷ್ಟ್ರದಲ್ಲಿ ಉಂಟಾಗಿರುವ ಬರದ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ. ಹಾಗೂ ಈ ಬಗ್ಗೆ ಸಮಿತಿ ಸಭೆಯನ್ನು ಕರೆದಿದೆ. ಸಮಿತಿ ಸಭೆಯಲ್ಲಿ ಎಷ್ಟು ಹಣದ ನೆರವು ನೀಡಬೇಕೆಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಬರದ ಸಮಸ್ಯೆ ಸಾಮಾನ್ಯವಾಗಿದ್ದು, ಇದನ್ನು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಮಳೆಯಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ನಮ್ಮಿಂದ ಸಾಧ್ಯವಾದ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಇನ್ನು ರಾಜ್ಯ ಸರ್ಕಾರ ಕೂಡ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಲಿವೆ. ವರದಿ ಸಲ್ಲಿಕೆಯಾದ ನಂತರವಷ್ಟೇ ಸಮಿತಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳುತ್ತೇವೆ.
ಈ ಹಂತಗಳು ಸಾಮಾನ್ಯಾವಾಗಿದ್ದು, ಸಾಕಷ್ಟು ಬಾರಿ ನಾವು ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ನಮಗೆ ನಮ್ಮ ಕರ್ತವ್ಯ ತಿಳಿದಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ನೈಸರ್ಗಿಕ ವಿಪತ್ತನ್ನು ಹಣವನ್ನು ಹೆಚ್ಚು ಮಾಡಿದ್ದು, ಶೇ.50 ಕ್ಕಿಂತ ಹೆಚ್ಚು ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯಗಳಿಗೆ ಸರ್ಕಾರ ಹಣವನ್ನು ನೀಡಲಿದೆ. ಆದರೆ, ಇದೀಗ ಸರ್ಕಾರ ಶೇ. 33 ರಷ್ಟು ಹಾನಿಯಾಗಿರುವ ರಾಜ್ಯಗಳಿಗೂ ನೆರವು ನೀಡಲು ತೀರ್ಮಾನಿಸಿದೆ. ಬರದಿಂದಾಗಿ ಜೀವ ಕಳೆದುಕೊಂಡವರಿಗೆ ರು. 1, 20,000 ರಿಂದ 4,00,000 ರಷ್ಟು ಪರಿಹಾರ ಧನವನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.
ರೈತರಿಗೆ ಸಹಾಯವಾಗಲೆಂದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿದ್ದು, ಈ ಮೂಲಕವೂ ರೈತರಿಗೆ ನೆರವು ಹಣ ಬಿಡುಗಡೆಯಾಗಲಿದೆ. ಯೋಜನೆಯನ್ನು ಜನಪ್ರಿಯಗೊಳ್ಳುವಂತೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯೋಜನೆಯಲ್ಲಿ ಕಟ್ಟುವ ವಿಮೆಯ ಕಂತು ಕಡಿಮೆಯಿದ್ದು, ಬಿಡುಗಡೆಯಾಗುವ ಹಣ ಮಾತ್ರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ, ತೆಲಂಗಾಣ ಸೇರಿ 9 ರಾಜ್ಯಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬರ ಪೀಡಿತ ರಾಜ್ಯಗಳಾಗಿ ನಿರ್ಮಾಣವಾಗುತ್ತಿದೆ. ತೆಲಂಗಾಣವೊಂದರಲ್ಲೇ ಭೀಕರ ಬಿಸಿಲಿಗೆ ಈಗಾಗಲೇ 66 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.