ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಬಿಸಿಲಿನ ಝಳ ತಾಳಲಾರದೆ ಈ ವರೆಗೂ ಒಟ್ಟು 66 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿರುವ ವರದಿಯಂತೆ ಈ ವರೆಗೂ ಬಿಸಿಲಿನ ತಾಪಕ್ಕೆ 66 ಮಂದಿ ಸಾವನ್ನಪ್ಪಿದ್ದು, ಮೆಹಬೂಬ್ ನಗರ್ ಜಿಲ್ಲೆಯೊಂದರಲ್ಲೇ 28 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಇನ್ನು ನಲ್ಗೊಂಡ ದಲ್ಲಿ 2, ಖಮ್ಮಮ್ 5, ಕರೀಂನಗರ 5, ಮೇದಕ್ 11, ಅದಿಲಾಬಾದ್ 4, ನಿಜಾಮಾಬಾದ್ ಮತ್ತು ವರಂಗಲ್ ನಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಿಂದ ತಿಳಿದುಬಂದಿದೆ. ಹೈದರಾಬಾದ್ ಹಾಗೂ ರಂಗಾರೆಡ್ಡಿಯಲ್ಲಿ ಜನ ಸಾವನ್ನಪ್ಪಿರುವ ಯಾವುದೇ ವರದಿಗಳು ಬಂದಿಲ್ಲ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಕೂಡ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಸಿಲಿನ ಪ್ರತಾಪ ಜೋರಾಗಿಯೇ ಇತ್ತು. ಬಿಸಿಲಿನ ಬೇಗೆಗೆ ಸುಮಾರು 2,500 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಇದರಂತೆ ಈ ವರ್ಷ ಕೂಡ ಬಿಸಿಲಿನಿಂದಾಗಿ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.