ಶ್ರೀನಗರ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಕ್ಯಾಂಪಸ್ ನಲ್ಲಿ ನಡೆದ ಘರ್ಷಣೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ವಿಶ್ವಕಪ್ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಜಯಗಳಿಸಿದ ವೇಳೆ ನಡೆದ ಸಂಭ್ರಮಾಚರಣೆ ಸಂದರ್ಭ ಸ್ಥಳೀಯ ಮತ್ತು ಹೊರಗಿನ ವಿದ್ಯಾಥಿಗಳ ಮಧ್ಯೆ ಸಂಭವಿಸಿದ ಘರ್ಷಣೆಯಿಂದ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂವರು ಸದಸ್ಯರ ತಂಡ ಎನ್ಐಟಿಗೆ ಭೇಟಿ ನೀಡಿತ್ತು.
ಈ ಪ್ರಕರಣ ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ನೂತನ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಎನ್ ಐಟಿ ಕ್ಯಾಂಪಸ್ ನಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ತಡೆಯುವ ಕುರಿತು ಮೆಹಬೂಬ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಘಟನೆ ಕಾಶ್ಮೀರ ಸರ್ಕಾರ ತನಿಖೆಗೆ ಆದೇಶಿಸಿದೆ.
ಕಳೆದ ವಾರ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ತಂಡದೆದುರು ಪರಾಭವಗೊಂಡದ್ದನ್ನು ಅನುಸರಿಸಿ ಶ್ರೀನಗರದ ಎನ್‌ಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಗುಂಪು ಪರಸ್ಪರ ಹೊಡೆದಾಡಿಕೊಂಡ ಕಾರಣ ತೀವ್ರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.