ದೇಶ

ಎನ್ ಐಟಿ ಗಲಭೆ; ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Srinivasamurthy VN

ಶ್ರೀನಗರ: ಅನಾವಶ್ಯಕವಾಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಕಾಶ್ಮೀರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀನಗರ ಎನ್ ಐಟಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರೆದಿದೆ.

ಕಾಶ್ಮೀರದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಆವರಣದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಇಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು. ಈ ವೇಳೆ ಪೊಲೀಸರ  ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಂತೆಯೇ ತಮ್ಮ ಪ್ರತಿಭಟನಾ ರ್ಯಾಲಿಯನ್ನು ಶಿಕ್ಷಣ ಸಂಸ್ಥೆಯ ಹೊರಗೆ  ಮುಂದುವರೆಸಲು ಯತ್ನಿಸಿದರಾದರೂ ವಿದ್ಯಾರ್ಥಿಗಳನ್ನು ಪೊಲೀಸರು ಆವರಣದಲ್ಲೇ ತಡೆದರು.

ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಕೆಲಕಾಲ ವಾಕ್ಸಮರ ಏರ್ಪಟ್ಟಿತ್ತಾದರೂ ಹಿರಿಯ ಅಧಿಕಾರಿದಳ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು. ವಿದ್ಯಾರ್ಥಿ ಮುಖಂಡರ  ಜೊತೆ ಮಾತುಕತೆ ನಡೆಸಿದ ಹಿರಿಯ ಅಧಿಕಾರಿಗಳು ಪ್ರತಿಭಟನಾ ರ್ಯಾಲಿಯನ್ನು ತಡೆಯುವಲ್ಲಿ ಯಶಸ್ವಿಯಾದರು.

ಇನ್ನು ಮಾರ್ಚ್ 31 ಮತ್ತು ಏಪ್ರಿಲ್ 4ರಂದು ಶ್ರೀನಗರ ಎನ್ ಐಟಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ತನಿಖೆಗೆ ಆದೇಶಿಸಿದೆ.

SCROLL FOR NEXT