ನವದೆಹಲಿ: ನಾನು ದೇಶದ ಕಾನೂನು ಪಾಲಿಸುವ ನಾಗರಿಕ ಎಂದಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಆದಾಯ ತೆರಿಗೆ ಇಲಾಖೆಗೆ ಉತ್ತಮ ಸಹಕಾರ ನೀಡುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ.
ಕಳೆದ 6-7 ವರ್ಷಗಳಿಂದ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ತನಿಖೆಗೆ ಸಹಕಾರ ನೀಡುತ್ತಾ ಬಂದಿದ್ದೇನೆ. ನೋಟಿಸ್ ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದೇನೆ. ನಾನು ದೇಶದ ಕಾನೂನು ಪಾಲಿಸುವ ನಾಗರಿಕ ಎಂದು ಬಿಗ್ ಬಿ ತಿಳಿಸಿದ್ದಾರೆ.
ಪನಾಮ ಪೇಪರ್ಸ್ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪವನ್ನು ತಳ್ಳಿ ಹಾಕಿದ ಅಮಿತಾಬ್ ಬಚ್ಚನ್, ನಾನು ಹಿಂದೆ ಹೇಳಿದಂತೆ ಪನಾಮದಲ್ಲಿ ನಾನು 4 ಕಂಪನಿಗಳ ನಿರ್ದೇಶಕನಾಗಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಯುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ನನ್ನ ಹೆಸರು ಹೇಗೆ ಕೇಳಿ ಬಂತು ಎನ್ನುವುದೇ ಅನುಮಾನವಿದೆ. ಹಾಗಾಗಿ, ತನಿಖೆ ನಡೆಯಬೇಕು ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪನಾಮ ಪೇಪರ್ಸ್ ಸೋರಿಕೆಯಲ್ಲಿ ನನ್ನ ಹೆಸರು ಕೇಳಿ ಬಂದಿರುವುದರಿಂದ ನನ್ನ ರಾಜಿನಾಮೆಗೆ ಆಗ್ರಹಿಸಲಾಗುತ್ತಿದೆ ಎಂದು ಕೇಳಿಪಟ್ಟೆ. ಆದರೆ, ನನ್ನನ್ನು ಮಹಾರಾಷ್ಟ್ರ ಸರ್ಕಾರ ಆಯ್ಕೆ ಮಾಡಿರುವುದು. ರಾಜ್ಯ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಅಲ್ಲಿಯವರೆಗೆ ಸಾಮಾಜಿಕ ಸೇವೆಗಳಾದ ಹುಲಿ ಸಂರಕ್ಷಣೆ, ಪೋಲಿಯೋ, ಸ್ವಚ್ಛ ಭಾರತ, ಟಿಬಿ, ಹೆಪಟೈಟಿಸ್ ಬಿ, ಡಯಾಬಿಟಿಸ್, ಕುಟುಂಬ ಯೋಜನೆಗಳ ಬಗ್ಗೆ ಅಭಿಯಾನವನ್ನು ಮುಂದುವರೆಸುತ್ತೇನೆ ಎಂದು ಬಿಗ್ ಬಿ ತಿಳಿಸಿದ್ದಾರೆ.
ಪನಾಮ ಪೇಪರ್ಸ್ ದಾಖಲೆಗಳಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೆಸರು ತಳುಕು ಹಾಕಿಕೊಂಡಿರುವುದರಿಂದ ಮಹಾರಾಷ್ಟ್ರ ಸರ್ಕಾರದ ಸೇವ್ ಟೈಗರ್ ಅಭಿಯಾನದಿಂದ ಅಮಿತಾಬ್ ಅವರನ್ನು ಕೈ ಬಿಡುವಂತೆ ಕಾಂಗ್ರೆಸ್ ಆಗ್ರಹಿಸಿತ್ತು.
ವಿದೇಶದಲ್ಲಿ ತೆರಿಗೆ ವಂಚಿಸಿ ಯಾರೆಲ್ಲಾ ಅಕ್ರಮ ಸಂಪತ್ತನ್ನು ಹೊಂದಿದ್ದಾರೆ ಎಂಬ ಮಾಹಿತಿ ಪನಾಮ ಪೇಪರ್ ಸೋರಿಕೆಯಿಂದ ಬಯಲಾಗಿತ್ತು. ಇದರಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಹೆಸರು ಕೇಳಿಬಂದಿತ್ತು.