ಶ್ರೀನಗರ: ಅನಾವಶ್ಯಕವಾಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಕಾಶ್ಮೀರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀನಗರ ಎನ್ ಐಟಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರವೂ ಮುಂದುವರೆದಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ರಾಜ್ಯ ಸರ್ಕಾರ ನಡೆಸಿದ ಮಾತುಕತೆ ಫಲಪ್ರದವಾಗದೆ ಮನವೊಲಿಕೆ ಯತ್ನ ವಿಫಲವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮೆಹಬೂಬಾ ಮುಫ್ತಿ, ಎನ್ಐಟಿ ವಿದ್ಯಾರ್ಥಿಗಳ ಪ್ರತಿಭಟನೆ ಚರ್ಚೆಯ ವಿಷಯವೇ ಅಲ್ಲ. ಆದರೂ ಈ ಘಟನೆಯನ್ನು ಕೋಮು ಘಟನೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎನ್ಐಟಿ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರೊಂದಿಗೂ ಮಾತನಾಡಿದ್ದು, ಅನಾವಶ್ಯಕವಾಗಿ ಘಟನೆಯನ್ನು ಕೋಮು ಘಟನೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬ ವಿಷಯವನ್ನು ತಿಳಿಸಿರುವುದಾಗಿ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ. ಎನ್ಐಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರದಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲು ಇಚ್ಛಿಸುತ್ತಿದ್ದರು ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.