ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಮೆಹಬೂಬಾ ಮುಫ್ತಿ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಮಂಗಳವಾರ ಭೇಟಿಯಾಗಲಿದ್ದಾರೆಂದು ತಿಳಿದುಬಂದಿದೆ.
ಇಂದು ಸಂಜೆ ಗೃಹ ಸಚಿವಾಲಯಕ್ಕೆ ಭೇಟಿ ನೀಡಲಿರುವ ಮೆಹಬೂಬಾ ಮುಫ್ತಿಯವರು ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.
ಏಪ್ರಿಲ್ 4 ರಂದು ಮೆಹಬೂಬಾ ಮುಫ್ತಿಯವರು ಜಮ್ಮ ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಿದ್ದರು. ಇದೀಗ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗುತ್ತಿದ್ದಾರೆ.
ಕಳೆದ ವರ್ಷ ಪಿಡಿಪಿ ಪಕ್ಷದ ಮುಫ್ತಿ ಮೊಹಮ್ಮದ್ ಸಯೀದ್ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಇದರಂತೆ ಮೈತ್ರಿ ಸರ್ಕಾರಗಳು ಯಾವುದೇ ಸಮಸ್ಯೆಯಿಲ್ಲದೆ 10 ತಿಂಗಳ ಕಾಲ ಅಧಿಕಾರ ನಡೆಸಿತ್ತು. ಆದರೆ, ಜ.7 ರಂದು ಮುಫ್ತಿ ಮೊಹಮ್ಮದ್ ಸಯೀದ್ ಅವರ ನಿಧನದ ನಂತರ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದವು.
ಈ ಭಿನ್ನಾಭಿಪ್ರಾಯಗಳು ಮತ್ತೆ ಮೈತ್ರಿ ಸರ್ಕಾರಗಳು ಒಂದಾಗುವುದಿಲ್ಲ, ಒಡೆದುಹೋಗುತ್ತವೆ ಎಂಬಂತಹ ವಾತಾವರಣವನ್ನು ಸೃಷ್ಟಿ ಮಾಡಿತ್ತು. ನಂತರ ಈ ಬಿಕ್ಕಟ್ಟು ಪ್ರಧಾನಮಂತ್ರಿ ನರೇಂದ್ರಮೋದಿಯವರು ಮಧ್ಯಸ್ಥಿಕೆ ವಹಿಸುವ ಮೂಲಕ ಬಗೆಹರಿದಿತ್ತು. ಇದೀಗ ಪಿಡಿಪಿ ಹಾಗೂ ಬಿಜೆಪಿ ಮೈತ್ರಿಗೊಂಡಿದ್ದು, ಜಮ್ಮು-ಕಾಶ್ಮೀರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ.