ನವದೆಹಲಿ: ಪಠಾಣ್ ಕೋಟ್ ನಂತಹ ಉಗ್ರ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಅತ್ಯಾಧುನಿಕ ಕ್ರಮದಲ್ಲಿ ಭಾರತದ ಗಡಿ ಪ್ರದೇಶಗಳನ್ನು ಭದ್ರ ಪಡಿಸುವತ್ತ ಮಹತ್ವದ ಹೆಜ್ಜೆಯನ್ನಿರಿಸಿದೆ.
ಪಾಕಿಸ್ತಾನ ಮತ್ತು ಭಾರತ, ಚೀನಾ ಮತ್ತು ಭಾರತದ ಗಡಿ ಪ್ರದೇಶದಲ್ಲಿ ಐದು ಬಗೆಯ ಬೇಲಿ ನಿರ್ಮಾಣಕ್ಕೆ ಕೇಂದ್ರ ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕೂಡ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಭಾರತದ ಸುಮಾರು 2900 ಕಿ.ಮೀ ಗಡಿ ಪ್ರದೇಶಳ ಅತ್ಯಂತ ಸುರಕ್ಷಿತವಾಗಲಿದೆ.
ಪಠಾಣ್ಕೋಟ್ ದಾಳಿ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಭಾರತ ಸರ್ಕಾರ ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಹಂಚಿಕೊಂಡಿರುವ 2,900 ಕಿ.ಮೀ ಉದ್ದದ ಗಡಿಯಲ್ಲಿ ಉಗ್ರರು ಮತ್ತು ಪಾಕ್ ಸೈನಿಕರ ಒಳನುಸುಳುವಿಕೆ ಹಾಗೂ ಕಳ್ಳಸಾಗಾಣಿಕೆ ನಿಗ್ರಹಕ್ಕಾಗಿ 5 ಹಂತದ ಲೇಸರ್ ಬೇಲಿ ನಿರ್ವಿುಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪಾಕಿಸ್ತಾನದ ಉಗ್ರರು ಹೆಚ್ಚು ಬಳಸುವ ಜಮ್ಮು-ಕಾಶ್ಮೀರದಿಂದ ಗುಜರಾತ್ವರೆಗೆ ಗಡಿ ಬೇಲಿಯಿಲ್ಲದ 130 ಪ್ರದೇಶಗಳಲ್ಲಿ ಈ ಲೇಸರ್ ಬೇಲಿ ನಿರ್ಮಾಣ ಮಾಡಲಾಗುತ್ತದೆ. ನದಿ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶದಲ್ಲೂ ಲೇಸರ್ ಬೇಲಿಗಳು ತಲೆ ಎತ್ತಲಿವೆ. ಇದರಿಂದ ಜಲ ಮತ್ತು ಭೂಮಾರ್ಗದ ಮೂಲಕವಾಗಿ ಬೇಲಿ ದಾಟಿದರೇ ಕೂಡಲೇ ನಿರ್ವಹಣಾ ಕೊಠಡಿಗೆ ಸಂದೇಶ ರವಾನೆಯಾಗುತ್ತದೆ.
ಇನ್ನು ಜಲ ಮತ್ತು ಭೂಮಾರ್ಗವಲ್ಲದೇ ಭೂಮಿಯೊಳಗೆ ಕನ್ನ ಕೊರೆದು ಆ ಮೂಲಕ ಗಡಿ ಪ್ರವೇಶಿಸುವ ಶತ್ರುಗಳನ್ನು ಕಂಡು ಹಿಡಿಯುವ ಭೂಮಿಯೊಳಗಿನ ವೀಕ್ಷಣಾ ಸಂವೇದಕ ವ್ಯವಸ್ಥೆ ಅಳವಡಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಹೊಸ ಭದ್ರತಾ ವ್ಯವಸ್ಥೆಯಡಿ ಸಿಸಿಟಿವಿ ಕ್ಯಾಮೆರಾಗಳು, ಥರ್ಮಲ್ ಇಮೇಜ್ ಮತ್ತು ರಾತ್ರಿ ವೇಳೆಯಲ್ಲಿಯೂ ವೀಕ್ಷಿಸಬಲ್ಲ ಸಾಧನಗಳು, ಸರ್ವೆಕ್ಷಣಾ ರಾಡಾರ್ಗಳು, ಭೂಗತ ಮಾನಿಟರಿಂಗ್ ಸೆನ್ಸರ್ಗಳು ಗಡಿಯಲ್ಲಿ ನಿರ್ಮಾಣಗೊಳ್ಳಲಿದೆ. ಈ ಭದ್ರತಾ ವ್ಯವಸ್ಥೆ ಪೂರ್ಣಗೊಂಡ ನಂತರ ಗಡಿಯಲ್ಲಿ ಯಾವುದೇ ಚಲನವಲನ ಕಂಡುಬಂದರೂ ಇದರ ಸಂಪೂರ್ಣ ಮಾಹಿತಿ ಕಂಟ್ರೋಲ್ ರೂಮ್ ಗೆ ಕ್ಷಣಾರ್ಧದಲ್ಲಿ ರವಾನೆಯಾಗುತ್ತದೆ. ಅಕಸ್ಮಾತ್ ಈ ಐದು ಸಾಧನಗಳ ಪೈಕಿ ಯಾವುದೇ ಒಂದು ಕೆಲಸ ಮಾಡದಿದ್ದರೂ ಮತ್ತೊಂದು ಸಾಧನದ ಮೂಲಕ ಮಾಹಿತಿ ಕಂಟ್ರೋಲ್ ರೂಂ ಸೇರುತ್ತದೆ.
ಒಟ್ಟಾರೆ ಈ ವ್ಯವಸ್ಥೆಯನ್ನು ಸಮಗ್ರ ಅಂತರ್ಗತ ಗಡಿ ನಿರ್ವಹಣಾ ವ್ಯವಸ್ಥೆ (ಸಿಐಬಿಎಂಎಸ್)ಎಂದು ಕರೆಯಲಾಗುತ್ತದೆ. ಅಧಿಕಾರಿಗಳ ಪ್ರಕಾರ ಪಠಾಣ್ಕೋಟ್ನಂಥ ದಾಳಿಯನ್ನು ತಡೆಯಲು ಈ ವಿಧಾನ ಅತ್ಯಂತ ಸಮರ್ಥವಾಗಿದ್ದು, ಕಳ್ಳಸಾಗಣೆ ಮತ್ತು ಒಳನುಸುಳುವಿಕೆಯನ್ನೂ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ.