ನವದೆಹಲಿ: ಕಾಗದದ ಮೇಲೆ ಮುದ್ರಿತವಾದ ಆಧಾರ್ ಕಾರ್ಡ್, ಅಧಿಕೃತ ಉದ್ದೇಶದ ಬಳಕೆಗೆ ಪರಿಪೂರ್ಣ ಸಿಂಧುತ್ವ ಹೊಂದಿದೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಸ್ಪಷ್ಟಪಡಿಸಿದೆ. ಪ್ಲಾಸ್ಟಿಕ್ ಕಾರ್ಡ್‌ನಲ್ಲಿ (ಸ್ಮಾರ್ಟ್ ಕಾರ್ಡ್) ಆಧಾರ್ ಸಂಖ್ಯೆ ಮುದ್ರಿಸಿಕೊಡಲು ಕೆಲವು ಸಂಸ್ಥೆಗಳು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಎಚ್ಚರ ವಹಿಸಿ ಎಂದು ಪ್ರಾಧಿಕಾರವು ತಿಳಿಸಿದೆ.
ಸ್ಮಾರ್ಟ್ ಆಧಾರ್ ಕಾರ್ಡ್ ಮುದ್ರಿಸಿ ಕೊಡಲು ರು. 50ರಿಂದ ರು. 200 ಹಣ ವಸೂಲಿ ಮಾಡಲು ಮುಂದಾಗಿರುವ ಸಂಸ್ಥೆಗಳು, ಈ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಆನ್‌ಲೈನ್ ಮಾರಾಟ ತಾಣಗಳಾದ ಇ–ಬೆ, ಫ್ಲಿಕ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದಕ್ಕೂ ಪ್ರಾಧಿಕಾರವು ತನ್ನ ತೀವ್ರ ಆಕ್ಷೇಪ ದಾಖಲಿಸಿದೆ.
ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಕ್ರಿಮಿನಲ್ ಅಪರಾಧದಡಿ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂದು ಎಚ್ಚರಿಸಿದೆ.
ಗ್ರಾಹಕರಿಗೆ ವಿತರಿಸಲಾದ ಆಧಾರ್ ಕಾರ್ಡ್ ಅಥವಾ ಆನ್‌ಲೈನ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಕಾಗದದ ಮೇಲೆ ಮುದ್ರಿಸಿದ ಕಾರ್ಡ್ ವಿವರಗಳು ಎಲ್ಲ ಕಡೆಗಳಲ್ಲಿ ಬಳಸಲು ಅರ್ಹವಾಗಿವೆ.
ಅದೇ ವೇಳೆ ಕಾಗದದ ರೂಪದಲ್ಲಿ ಆಧಾರ್ ಕಾರ್ಡ್ ಹೊಂದಿದವರು ಅದನ್ನು ಲ್ಯಾಮಿನೇಟ್ ಮಾಡುವ ಅಥವಾ ಹಣ ಪಾವತಿಸಿ ಸ್ಮಾರ್ಟ್ ಕಾರ್ಡ್ ಹೊಂದುವ (ಪ್ಲಾಸ್ಟಿಕ್ ಕಾರ್ಡ್) ಅಗತ್ಯ ಇಲ್ಲ ಎಂದು ಪ್ರಾಧಿಕಾರದ ಮಹಾ ನಿರ್ದೇಶಕ ಅಜಯ್ ಭೂಷಣ್ ಪಾಂಡೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲ ಸಂಸ್ಥೆಗಳು ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ರು.50 ರಿಂದ ರು. 200ವರೆಗೆ ಶುಲ್ಕ ವಿಧಿಸಿ ಪ್ಲಾಸ್ಟಿಕ್ ಕಾರ್ಡ್ ನೀಡುವುದಾಗಿ ಹೇಳಿಕೊಳ್ಳುತ್ತಿರುವುದು ತಪ್ಪು. ಪ್ರಾಧಿಕಾರವು ರವಾನಿಸಿದ ಆಧಾರ್ ಪತ್ರ ಅಥವಾ ಅದರಲ್ಲಿ ಕಾರ್ಡ್ ಸಂಖ್ಯೆ ಬೇರ್ಪಡಿಸಿದ ಭಾಗ ಇಲ್ಲವೆ ಅಂತರ್ಜಾಲ ತಾಣದಿಂದ ಪಡೆದ ಕಾಗದ ಮೇಲಿನ ಆಧಾರ್ ಸಂಖ್ಯೆ ಎಲ್ಲೆಡೆ ಊರ್ಜಿತವಾಗಿರುತ್ತದೆ.
ಒಂದು ವೇಳೆ ಆಧಾರ್ ಕಾರ್ಡ್ ಕಳೆದುಕೊಂಡರೆ, ‘ಯುಐಡಿಎಐ’ ಅಂತರ್ಜಾಲ ತಾಣದಿಂದ ಉಚಿತವಾಗಿ ಪಡೆಯಬಹುದಾಗಿದೆ. ಕಪ್ಪು ಬಿಳುಪಿನ ಕಾರ್ಡ್, ಪ್ರಾಧಿಕಾರವು ರವಾನಿಸಿದ ಮೂಲ ಕಾರ್ಡ್‌ನಷ್ಟೇ ಸಿಂಧುತ್ವ ಹೊಂದಿದೆ ಎಂದು ಪಾಂಡೆ ಸ್ಪಷ್ಟ ಪಡಿಸಿದ್ದಾರೆ.
ಇಷ್ಟಕ್ಕೂ ವ್ಯಕ್ತಿಗಳು ಆಧಾರ್ ಕಾರ್ಡ್ ಲ್ಯಾಮಿನೇಟ್ ಮಾಡಿಸಲು ಅಥವಾ ಪ್ಲಾಸ್ಟಿಕ್ ಕಾರ್ಡ್ ಮೇಲೆ ಮುದ್ರಿಸಿ ಇಟ್ಟುಕೊಳ್ಳಲು ಬಯಸುವವರು ಅಧಿಕೃತ ಸೇವಾ ಕೇಂದ್ರಗಳು ಅಥವಾ ಆಧಾರ್ ಶಾಶ್ವತ ನೋಂದಣಿ ಕೇಂದ್ರಗಳಲ್ಲಿ ರು. 30 ಪಾವತಿಸಿ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದು, ಸಾರ್ವಜನಿಕರಿಂದ ಆಧಾರ್ ಮಾಹಿತಿ ಪಡೆಯಲು ಯಾರಿಗೂ ಅನುಮತಿ ನೀಡಬಾರದು ಎಂದು ಇ–ವಾಣಿಜ್ಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.