ಶ್ರೀನಗರ: ವಿದ್ಯಾರ್ಥಿನಿಗೆ ಯೋಧನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಕೆಲ ಧಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಿಂಸಾಚಾರದಲ್ಲಿ ಮಡಿದವರ ಸಂಖ್ಯೆ ಇದೀಗ 3ಕ್ಕೇರಿದೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಯೋಧರು ಹಾರಿಸಿದ ಗುಂಡಿಗೆ ನಿನ್ನೆ ಇಬ್ಬರು ಯುವಕರು ಬಲಿಯಾಗಿದ್ದರು. ಅಲ್ಲದೆ ಓರ್ವ ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡು ಸ್ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ 55 ವರ್ಷದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ ಹಂದ್ವಾರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಹಬದಿಗೆ ತರಲು ಯೋಧರು ಮತ್ತು ಪೊಲೀಸರು ಹರಸಾಹಪಡುತ್ತಿದ್ದು, ಸಾರ್ವಜನಿಕರು ನಡೆಸುತ್ತಿರುವ ಕಲ್ಲುತೂರಾಟದಿಂದಾಗಿ ಪೊಲೀಸರು ಮತ್ತು ಕೆಲ ಯೋಧರು ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ ವಿದ್ಯಾರ್ಥಿನಿಗೆ ಯೋಧನೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದರು. ಅಲ್ಲದೆ ಈ ಕುರಿತಂತೆ ನಿನ್ನೆ ವ್ಯಾಪಕ ಪ್ರತಿಭಟನೆ ಕೂಡ ಮಾಡಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಯೋಧರು ಗುಂಡುಹಾರಿಸಿದ್ದರು. ಈ ವೇಳೆ ಇಕ್ಬಾಲ್ ಅಹ್ಮದ್ ಮತ್ತು ನಯೀಮ್ ಭಟ್ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು. ಬಳಿಕ ಸಾರ್ವಜನಿಕರು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಈ ವೇಳೆ ದೇಶ ವಿರೋಧಿ, ಪರ ಸ್ವಾತಂತ್ರ್ಯ ಘೋಷಣೆಗಳನ್ನು ಕೂಗಿ, ಮಿಲಿಟರಿ ಬಂಕರ್ ಗಳ ಮೇಲೆ ಕಲ್ಲಿನಿಂದ ದಾಳಿ ನಡೆಸಿ ನಂತರ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಹಂದ್ವಾರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಎಲ್ಲೆಡೆ ಯೋಧರ ಬಿಗಿ ಭದ್ರತೆ ನಿಯೋಜಿಸಲಾಗಿದೆ.