ದೇಶ

ದೆಹಲಿಯಲ್ಲಿ 2ನೇ ಹಂತದ ಸಮ-ಬೆಸ ಜಾರಿ: ಮೊದಲ 5 ಗಂಟೆಯಲ್ಲಿ 511 ಮಂದಿಗೆ ದಂಡ

Lingaraj Badiger
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದ ಎರಡನೇ ಹಂತ ಸಮ-ಬೆಸ ಯೋಜನೆಯ ಜಾರಿಗೊಂಡಿದ್ದು, ಮೊದಲ ಐದು ಗಂಟೆಗಳಲ್ಲಿ ನಿಯಮ ಉಲ್ಲಂಘಿಸಿದ 511 ಮಂದಿಗೆ ದಂಡ ವಿಧಿಸಲಾಗಿದೆ. 
ಇಂದು ಬೆಳಗ್ಗೆ 8ಗಂಟೆಯಿಂದ ಸಮ-ಬೆಸ ಯೋಜನೆ ಜಾರಿಯಾಗಿದ್ದು, ಮೊದಲ ದಿನವೇ ಸುಮಾರು 500 ಜನ ನಿಯಮ ಉಲ್ಲಂಘಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ವಾಹನಗಳಿಂದ ಗಿಜಿಗುಡುತ್ತಿದ್ದ ದೆಹಲಿ ರಸ್ತೆಗಳಲ್ಲಿ ಇಂದು ಕಡಿಮೆ ಸಂಖ್ಯೆಯಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದದ್ದು ಕಂಡುಬಂತು.
ಸಮ-ಬೆಸ ಯೋಜನೆಯ ಎರಡನೇ ಹಂತ ನಿರ್ಣಾಯಕ ಎಂದು ಹೇಳಿರುವ ದೆಹಲಿಯ ಆಪ್ ಸರ್ಕಾರ, 2000 ಮಂದಿ ಟ್ರಾಫಿಕ್ ಸಿಬ್ಬಂದಿ, 580 ಮಂದಿ ಜಾರಿ ಅಧಿಕಾರಿಗಳು ಮತ್ತು 5000ಕ್ಕೂ ಹೆಚ್ಚು ಮಂದಿ ಸಿವಿಲ್ ಡಿಫೆನ್ಸ್ ಸ್ವಯಂಸೇವಕರನ್ನು ಯೋಜನೆಯ ಯಶಸ್ವಿ ಜಾರಿಗಾಗಿ ನಿಯೋಜಿಸಿದೆ.
ವಿಶ್ವದಲ್ಲೇ ಅತ್ಯಂತ ಹೆಚ್ಚು ವಾಯುಮಾಲಿನ್ಯಕ್ಕೆ ಗುರಿಯಾಗಿದೆ ಎಂದು ಪರಿಗಣಿಸಲಾದ ದೆಹಲಿಯ ವಾಯುಮಾಲಿನ್ಯ ಹಾಗೂ ವಾಹನ ದಟ್ಟಣೆ ನಿವಾರಣೆ ಸಲುವಾಗಿ ಆಮ್ ಆದ್ಮಿ ಪಕ್ಷ ಸರ್ಕಾರವು ಜನವರಿ 1ರಿಂದ 15ರವರೆಗೆ ಸಮ-ಬೆಸ ಯೋಜನೆಯ ಮೊದಲ ಹಂತವನ್ನು ಜಾರಿಗೊಳಿಸಿತ್ತು. ದೆಹಲಿಯ 2.30 ಕೋಟಿ ನಿವಾಸಿಗಳು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ಸಂಚರಿಸುವ ಮೂಲಕ ಯೋಜನೆಯ ಯಶಸ್ಸಿಗೆ ಸಹಕರಿಸಿದ್ದರು. ಈ ಬಾರಿಯೂ ಜನ ಇದೇ ರೀತಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
SCROLL FOR NEXT