ಕೊಲ್ಲಂ: ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದಲ್ಲಿ ಅಗ್ನಿ ದುರಂತ ಸಂಭವಿಸಿ ಆರು ದಿನಗಳು ಕಳೆದಿದ್ದರೂ ದೇವಾಲಯದಲ್ಲಿ ಇನ್ನೂ ಪೂಜಾ ಕಾರ್ಯಗಳು ಪ್ರಾರಂಭವಾಗಿಲ್ಲ.
ದೇವಾಲಯದ ದಿನನಿತ್ಯದ ಕಾರ್ಯಕ್ರಮಗಳನ್ನು ನಡೆಸುವುದರ ಬಗ್ಗೆ ಇನ್ನೂ ಗೊಂದಲಗಳಿರುವುದರಿಂದ ಪೂಜಾ ಕಾರ್ಯಗಳು ಪ್ರಾರಂಭವಾಗಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಒಂದಷ್ಟು ಜನರು ಶನಿವಾರದಿಂದೇ ದೇವಾಲಯವನ್ನು ತೆರೆಯಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಮತ್ತೆ ಕೆಲವು ಜನರು ಶುದ್ಧೀಕರಣ ಕಾರ್ಯ ನಡೆದ ಬಳಿಕವಷ್ಟೇ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ಪಟ್ಟು ಹಿಡಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ದೇವಾಲಯದ 15 ಸದಸ್ಯರ ಸಮಿತಿ ನ್ಯಾಯಾಂಗ ಬಂಧನದಲ್ಲಿರುವ ಕಾರಣಾದಿಂದಲೂ ಪೂಜಾ ಕಾರ್ಯಗಳು ಸ್ಥಗಿತಗೊಳ್ಳಲು ಕಾರಣ ಎಂದು ತಿಳಿದುಬಂದಿದೆ.