ನವದೆಹಲಿ: ಜಗತ್ತಿನ ಪ್ರಮುಖ ವ್ಯಕ್ತಿಗಳು ಭಾರತಕ್ಕೆ ಬಂದ ಸಂದರ್ಭದಲ್ಲಿ ಯಾವ ರೀತಿಯ ಉಡುಪು ಧರಿಸಿದ್ದರು, ಇಲ್ಲಿ ಬಂದು ಏನು ತಿಂದರು, ಏನು ಮಾಡಿದರು ಎಂದೆಲ್ಲ ಸುದ್ದಿಯಾಗುತ್ತದೆ, ಇನ್ನು ಬ್ರಿಟನ್ ನ ರಾಜಕುಮಾರಿ ಅಂದ ಮೇಲೆ ಕೇಳಬೇಕೆ, ಆಕೆ ತನ್ನ ರಾಜಕುಮಾರ ಪತಿಯೊಂದಿಗೆ ಇತ್ತೀಚೆಗೆ ಭಾರತಕ್ಕೆ ಪ್ರವಾಸ ಬಂದಿದ್ದ ಸಂದರ್ಭದಲ್ಲಿ ಧರಿಸಿದ್ದ ಉಡುಪು, ಹಾಕಿಕೊಂಡಿದ್ದ ಆಕ್ಸೆಸರೀಸ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಅವರು ಧರಿಸಿದ್ದ ಬಟ್ಟೆಗಳ ಬಗ್ಗೆ ಸಾಮಾಜಿಕ ಬರಹಗಾರ್ತಿ ಶೋಭಾ ಡೇ ಕೇಟ್ ಮಿಡ್ಲ್ ಟನ್ ಸಂಪೂರ್ಣವಾಗಿ ಟೀಕಿಸಿದ್ದಾರೆ.
ಕೇಟ್ ಭಾರತಕ್ಕೆ ಬಂದಿದ್ದಾಗ ಸೀರೆ ಧರಿಸಿರಲಿಲ್ಲ. ಆಕೆಯ ಸೊಂಟ ಗೌನ್ ಗೆ ಮಾತ್ರ ಹೊಂದಾಣಿಕೆಯಾಗುವಂತಿದೆ. ಸಾರಿ ಉಡಲು ಸೊಂಟ ವಕ್ರಾಕೃತಿಯಲ್ಲಿರಬೇಕು. ಆದರೆ ಕೇಟ್ ಅವರಲ್ಲಿ ಅದಿಲ್ಲ. ದೇವರ ದಯ ಸೀರೆ ಉಟ್ಟಿದ್ದರೆ ಏನು ಪಜೀತಿಯಾಗುತ್ತಿತ್ತೋ? ಸದ್ಯ ಅದನ್ನು ನೋಡುವ ದುರಾದೃಷ್ಟವಿಲ್ಲ ಎಂದು 68 ವರ್ಷದ ಬರಹಗಾರ್ತಿ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೇ ನಿಲ್ಲದೆ ತಮ್ಮ ಟೀಕೆಯನ್ನು ಮುಂದುವರಿಸಿರುವ ಶೋಭಾ ಡೇ, ಕೇಟ್ ಅವರು ಧರಿಸಿದ್ದ ಯಾವುದೇ ವಿನ್ಯಾಸದ ಬಟ್ಟೆಗಳು ಅತ್ಯುತ್ತಮವಾಗಿತ್ತು ಎನ್ನುವ ಮಟ್ಟದಲ್ಲಿರಲಿಲ್ಲ. ಮುಂಬೈಯಲ್ಲಿ ಖ್ಯಾತ ಉದ್ಯಮಿಗಳು ಮತ್ತು ಬಾಲಿವುಡ್ ನ ನಟ-ನಟಿಯರೊಂದಿಗಿನ ಔತಣಕೂಟದ ದಿನ ಕೇಟ್ ಧರಿಸಿದ್ದ ಜೆನ್ನಿ ಪಕ್ಹಮ್ ಗೌನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಶೋಭಾ, ಕೇಟ್ ಧರಿಸಿದ್ದ ಕಡು ನೀಲಿ ಬಣ್ಣದ ಗೌನ್ ಅವರಿಗೆ ಒಪ್ಪುತ್ತಿರಲಿಲ್ಲ. ಅದರ ಬದಲು ದಗಲೆ ಅಂಗಿ ಹಾಕಿದ್ದರೆ ಅದರಲ್ಲಿ ಚೆನ್ನಾಗಿ ಕಾಣುತ್ತಿದ್ದರು. ಅಂದು ಅವರಿಗೆ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ಬಿಡುವಿಲ್ಲದ ಕಾರ್ಯಕ್ರಮವಿತ್ತು. ಅಂದು ರಾಜಕುಮಾರಿ ಧರಿಸಿದ್ದ ಗೌನ್ ಅರಬ್ ದೇಶಕ್ಕೆ ಹೊಂದಾಣಿಕೆಯಾಗುವಂತಿತ್ತು. ಕೇಟ್ ಅವರು ಬಂದಿದ್ದು ಮುಂಬೈಗೆ, ಅಬು ಧಾಬಿಗೆ ಅಲ್ಲ. ಹಾಗಾಗಿ ಅವರ ಬಟ್ಟೆ ಈ ದೇಶಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆಗೆ ಊಟ ಮಾಡುವ ಕಾರ್ಯಕ್ರಮದ ಸಂದರ್ಭದಲ್ಲಿ ಕೂಡ ಕೇಟ್ ಅವರ ಡ್ರೆಸ್ ಹೊಂದಾಣಿಕೆಯಾಗುತ್ತಿರಲಿಲ್ಲ. ಮೋದಿಯವರು ಧರಿಸಿದ್ದ ಬೇಬಿ ಗುಲಾಬಿ ಬಣ್ಣದ ಬುಂದಿ ಜಾಕೆಟ್ ಮತ್ತು ಬಿಳಿ ಬಣ್ಣದ ಶರ್ಟ್ ಚೆನ್ನಾಗಿ ಹೊಂದಾಣಿಕೆಯಾಗುತ್ತಿತ್ತು. ಅದೇ ಕೇಟ್ ಅವರ ಆಕ್ವಾ ಉಡುಗೆ ಅವರಿಗೆ ಒಂಚೂರು ಚೆಂದ ಕಾಣಿಸುತ್ತಿರಲಿಲ್ಲ. ಒಟ್ಟಾರೆ, ರಾಜಕುಮಾರಿ ಕೇಟ್ ಮಿಡ್ಲ್ ಟನ್ ತಮ್ಮ ಭಾರತ ಪ್ರವಾಸದಲ್ಲಿ ಧರಿಸಿದ್ದ ಉಡುಪು ಆಕರ್ಷಕವಾಗಿರಲಿಲ್ಲ ಮತ್ತು ಸಪ್ಪೆಯಾಗಿತ್ತು ಎಂದಿದ್ದಾರೆ ಶೋಭಾ ಡೇ.