ನವದೆಹಲಿ: ರಜೆ ಮತ್ತು ಪ್ರಯಾಣ ಭತ್ಯೆ ವಿನಾಯಿತಿ (ಎಲ್'ಟಿಸಿ) ಹಗರಣದಲ್ಲಿ ಸಿಲುಕಿರುವ ಅನಿಲ್ ಕುಮಾರ್ ಸಹಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಬಿಐಗೆ ರಾಜ್ಯಸಭೆ ಅಧ್ಯಕ್ಷ ಹಮೀದ್ ಅನ್ಸಾರಿಯವರು ಶುಕ್ರವಾರ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಈಗಾಗಲೇ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅನ್ಸಾರಿಯವರು, ಅಪರಾಧ ಪ್ರಕ್ರಿಯಾ ಸಂಹಿತೆ 197 ಅಡಿಯಲ್ಲಿ ಕಾನೂನು ಕ್ರಮ ಜರಿಗಿಸುವಂತೆ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ರಾಜ್ಯಸಭಾ ಸಂಸದನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಇದೇ ಮೊದಲ ಬಾರಿಗೆ ಎಂದು ತಿಳಿದುಬಂದಿದೆ. ಈ ಹಿಂದಷ್ಟೇ ಪ್ರಕರಣ ಸಂಬಂಧ ಅನಿಲ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಐ ಅನ್ಸಾರಿಯವರ ಮೊರೆ ಹೋಗಿತ್ತು. 2015ರಲ್ಲಿ ಸಿಬಿಐ ಸಹಾನಿಯವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿಕೊಂಡಿತ್ತು.
ಕೋಲ್ಕತಾದ ವಿಮಾನ ನಿಲ್ದಾಣದ ಬಳಿ 600 ಬ್ಲಾಂಕ್ ಬೋರ್ಡಿಂಗ್ ಪಾಸ್ ಗಳನ್ನು ಮಾರುತ್ತಿದ್ದ ವ್ಯಕ್ತಿಯನ್ನು 2014ರ ಮಾರ್ಚ್ ತಿಂಗಳಿನಲ್ಲಿ ಅಧಿಕಾರಿಗಳು ಬಂಧನಕ್ಕೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ 2013ರಲ್ಲಿ ದಾಖಲಿಸಿದ್ದ ಮೊದಲ ಎಫ್ಐಆರ್ ನಲ್ಲಿ ನಕಲಿ ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ನೀಡಿ ರು. 9.5 ಲಕ್ಷ ವಂಚನೆ ಎಸಗಿರುವ ಆರೋಪವನ್ನು ಜೆಡಿಯು ರಾಜ್ಯಸಭೆ ಸಂಸದ ಅನಿಲ್ ಕುಮಾರ್ ಸಹಾನಿ ವಿರುದ್ದ ಹೊರಿಸಲಾಗಿತ್ತು.
ಅಲ್ಲದೆ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಗ್ರಾಹಕ ಸೇವಾ ವಿಭಾಗದ ಏಜೆಂಟ್ ರುಬಾಯಿನಾ ಅಖ್ತರ್, ಲಜಪತ್ ನಗರ ಮೂಲದ ಟ್ರಾವೆಲ್ ಅಪರೇಟ್ ಏರ್ ಕ್ರ್ಯೂಸ್ ಟ್ರಾವೆಲ್ಸ್ ಲಿಮಿಟೆಡ್ ಸಂಸ್ಥೆಗಳ ಮೇಲೂ ಪ್ರಕರಣ ದಾಖಲಿಸಲಾಗಿತ್ತು.