ನವದೆಹಲಿ: ರಜೆ ಮತ್ತು ಪ್ರಯಾಣ ಭತ್ಯೆ ವಿನಾಯಿತಿ (ಎಲ್'ಟಿಸಿ) ಹಗರಣದಲ್ಲಿ ಸಿಲುಕಿರುವ ರಾಜ್ಯಸಭೆ ಸಂಸದ ಅನಿಲ್ ಕುಮಾರ್ ಸಹಾನಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಮೀದ್ ಅನ್ಸಾರಿಯವರು ಸಿಬಿಐಗೆ ನೀಡಿರುವ ಸೂಚನೆಯನ್ನು ಜನತಾ ದಳ (ಸಂಯುಕ್ತ) ಮಾಜಿ ಮುಖ್ಯಸ್ಥ ಶರದ್ ಯಾದವ್ ಅವರು ಶುಕ್ರವಾರ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಸಂಬಂಧ ನನಗೆ ಅರಿವಿಲ್ಲ. ಆದರೆ, ನ್ಯಾಯಸಮ್ಮತವಲ್ಲದ ನಡವಳಿಕೆಯನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ಈ ಬಗ್ಗೆ ಪಕ್ಷ ಮಾಹಿತಿಯನ್ನು ಕಲೆ ಹಾಕಲಿದೆ ಎಂದು ಹೇಳಿದ್ದಾರೆ.
ಕೋಲ್ಕತಾದ ವಿಮಾನ ನಿಲ್ದಾಣದ ಬಳಿ 600 ಬ್ಲಾಂಕ್ ಬೋರ್ಡಿಂಗ್ ಪಾಸ್ ಗಳನ್ನು ಮಾರುತ್ತಿದ್ದ ವ್ಯಕ್ತಿಯನ್ನು 2014ರ ಮಾರ್ಚ್ ತಿಂಗಳಿನಲ್ಲಿ ಅಧಿಕಾರಿಗಳು ಬಂಧನಕ್ಕೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ 2013ರಲ್ಲಿ ದಾಖಲಿಸಿದ್ದ ಮೊದಲ ಎಫ್ಐಆರ್ ನಲ್ಲಿ ನಕಲಿ ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ನೀಡಿ ರು. 9.5 ಲಕ್ಷ ವಂಚನೆ ಎಸಗಿರುವ ಆರೋಪವನ್ನು ಜೆಡಿಯು ರಾಜ್ಯಸಭೆ ಸಂದಸ ಅನಿಲ್ ಕುಮಾರ್ ಸಹಾನಿ ವಿರುದ್ದ ಹೊರಿಸಲಾಗಿತ್ತು.
ಅಲ್ಲದೆ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಗ್ರಾಹಕ ಸೇವಾ ವಿಭಾಗದ ಏಜೆಂಟ್ ರುಬಾಯಿನಾ ಅಖ್ತರ್, ಲಜಪತ್ ನಗರ ಮೂಲದ ಟ್ರಾವೆಲ್ ಅಪರೇಟ್ ಏರ್ ಕ್ರ್ಯೂಸ್ ಟ್ರಾವೆಲ್ಸ್ ಲಿಮಿಟೆಡ್ ಸಂಸ್ಥೆಗಳ ಮೇಲೂ ಪ್ರಕರಣ ದಾಖಲಿಸಲಾಗಿತ್ತು.