ದೇಶ

ಕಿರ್ಪಾಲ್ ಸಿಂಗ್ ಮೃತದೇಹ ಭಾರತಕ್ಕೆ ತರುವುದಾಗಿ ಗೃಹ ಸಚಿವರ ಭರವಸೆ: ದಲ್ಬೀರ್ ಕೌರ್

Vishwanath S

ನವದೆಹಲಿ: ಇತ್ತೀಚೆಗಷ್ಟೆ ಪಾಕಿಸ್ತಾನದ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಭಾರತೀಯ ಪ್ರಜೆ ಕಿರ್ಪಾಲ್ ಸಿಂಗ್ ಮೃತದೇಹವನ್ನು ಭಾರತಕ್ಕೆ ತರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿರುವುದಾಗಿ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಹೇಳಿದ್ದಾರೆ.

ಮೃತ ಕಿರ್ಪಾಲ್ ಸಿಂಗ್ ಸಹೋದರಿ ಜಗೀರ್ ಕೌರ್ ಅವರು ದಲ್ಬೀರ್ ಕೌರ್ ಜತೆ ಸೇರಿ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿದ್ದು, ಈ ವೇಳೆ ಗೃಹ ಸಚಿವರು ತಾವು ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಿರ್ಪಾಲ್ ಸಿಂಗ್ ಮೃತದೇಹವನ್ನು ಭಾರತಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕಳೆದ ಮೂರು ವರ್ಷಗಳ ಹಿಂದೆ ಪಾಕಿಸ್ತಾನ ಜೈಲಿನಲ್ಲಿ ಸಹ ಕೈದಿಗಳು ಸರಬ್ಜಿತ್ ಸಿಂಗ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಸರಬ್ಜಿತ್ ಸಿಂಗ್ ಮೃತಪಟ್ಟಿದ್ದು, ಇದೀಗ ಇದೇ ರೀತಿ ಕಿರ್ಪಾಲ್ ಸಿಂಗ್ ರನ್ನು ಹತ್ಯೆ ಮಾಡಲಾಗಿದೆ ಎಂದು ಜಗೀರ್ ಕೌರ್ ಆರೋಪಿಸಿದ್ದಾರೆ.

ಭಾರತೀಯ ಪ್ರಜೆಯಾಗಿರುವ (50) ಕಿರ್ಪಾಲ್ ಸಿಂಗ್ ಅವರು 1992ರಲ್ಲಿ ಪಾಕಿಸ್ತಾನದ ಒಳಗಿನ ವಾಘ ಗಡಿಯನ್ನು ದಾಟಿ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.

ಪಂಜಾಬ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರ್ಪಾಲ್ ಸಿಂಗ್ ವಿರುದ್ಧ ಆರೋಪ ಹೊರಿಸಿ ಮರಣದಂಡನೆಯನ್ನು ವಿಧಿಸಲಾಗಿತ್ತು. ಬೇಹುಗಾರಿಕೆ ಆರೋಪದಡಿ ಬಂಧನಕ್ಕೊಳಗಾಗಿದ್ದ ಕಿರ್ಪಾಲ್ ಸಿಂಗ್ ಅವರು ಕಳೆದ 20 ವರ್ಷದಿಂದ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಕಿರ್ಪಾಲ್ ಸಿಂಗ್ ಏ.11 ರಂದು ಲಾಹೋರ್ ನ ಕಾಟ್ ಲಖ್ಪತ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ರಬ್ಜಿತ್ ಸಿಂಗ್ ಪ್ರಕರಣದಂತೆಯೇ ಕಿರ್ಪಾಲ್ ಸಿಂಗ್ ಪ್ರಕರಣದಲ್ಲೂ ಆಗಿದೆ. ಕಿರ್ಪಾಲ್ ರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿತ್ತು.

SCROLL FOR NEXT