ಮುಂಬೈ: ಚಂದಾ ಕೋಚ್ಚರ್, ಭಾರತೀಯ ಮಹಿಳಾ ಉದ್ಯಮಿಗಳಲ್ಲಿ ಪ್ರಭಾವಿ ಮಹಿಳೆ, ಅಷ್ಟೇ ಏಕೆ ಏಷ್ಯಾ ಖಂಡದಲ್ಲಿಯೇ ಜನಪ್ರಿಯ. ಐಸಿಐಸಿಐ ಬ್ಯಾಂಕಿನ ಮುಖ್ಯಸ್ಥೆ, ಸಾವಿರಾರು ಉದ್ಯೋಗಸ್ಥ ಮಹಿಳೆಯರಿಗೆ ಸ್ಪೂರ್ತಿ, ಪದ್ಮಭೂಷಣ ಪುರಸ್ಕೃತೆ.
ಇಂತಿಪ್ಪ ಒಬ್ಬ ಪ್ರಭಾವಿ ಮಹಿಳೆ ಸಾಮಾನ್ಯ ಜನರಂತೆ ಯೋಚಿಸಿ ತನ್ನ ಮಗಳಿಗೆ ಪತ್ರ ಬರೆದರೆ ಅದು ಖಂಡಿತಾ ಸುದ್ದಿಯಾಗುತ್ತದೆಯಲ್ಲವೇ? ಚಂದಾ ಕೋಚ್ಚರ್ ತಮ್ಮ ಪುತ್ರಿ ಆರತಿಗೆ ಬರೆದಿರುವ ಪತ್ರಕ್ಕೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಚಂದಾ ಕೋಚ್ಚರ್ ತಮ್ಮ ಮಗಳಿಗೆ ಬರೆದಿರುವ ಪತ್ರದ ಸಾರಾಂಶ ಹೀಗಿದೆ: ''ಒಬ್ಬ ವಿಶ್ವಾಸಭರಿತ ಯುವತಿಯಾಗಿ ನೀನು ನನ್ನ ಮುಂದೆ ನಿಂತಿರುವುದು ನನಗೆ ಇಂದು ಹೆಮ್ಮೆ ಅನಿಸುತ್ತಿದೆ. ಮುಂದಿನ ಭವಿಷ್ಯದ ವರ್ಷಗಳನ್ನು ನೀನು ಇದೇ ರೀತಿಯಾಗಿ ಎದುರಿಸುವುದನ್ನು ನಿನ್ನ ಅಭ್ಯದಯವನ್ನು ನಾನು ಎದುರು ನೋಡುತ್ತಿದ್ದೇನೆ. ಈ ಕ್ಷಣ ನನ್ನ ಜೀವನದ ಯಾನವನ್ನು ಮತ್ತು ಜೀವನದಲ್ಲಿ ನಾನು ನಾನು ಕಲಿತ ಪಾಠಗಳನ್ನು ನೆನಪಿಗೆ ತರುತ್ತಿದೆ. ನಾನು ನನ್ನನ ಹಿಂದಿನ ದಿನಗಳನ್ನು ನೆನೆದಾಗ ಬಹುತೇಕ ಪಾಠಗಳನ್ನು ಬಾಲ್ಯದ ಜೀವನದಲ್ಲಿಯೇ ಕಲಿತಿದ್ದೇನೆ ಎನ್ನುವುದನ್ನು ನಾನು ಮನಗಾಣುತ್ತೇನೆ. ನನ್ನ ಪೋಷಕರು ಹಾಕಿಕೊಟ್ಟ ಮಾರ್ಗದರ್ಶನಗಳ ಮೂಲಕವೇ ನಾನು ಹೆಚ್ಚಿನ ಪಾಠಗಳನ್ನು ಕಲಿತಿದ್ದೇನೆ. ನನ್ನ ಚಿಕ್ಕಂದಿನಲ್ಲಿ ಅಳವಡಿಸಿಕೊಂಡ ಮೌಲ್ಯಗಳು ನನ್ನ ಇಂದಿನ ಬದುಕಿಗೆ ಬುನಾದಿಯನ್ನು ಹಾಕಿಕೊಟ್ಟಿದೆ. ಉದ್ಯೋಗಸ್ಥ ಮಹಿಳೆಯ ಬದುಕು ಯಾವತ್ತೂ ಆಕೆಯ ಕುಟುಂಬ ಜೀವನದ ಮೇಲೆ ಪ್ರಭಾವ ಬೀರಬಾರದು. ವೃತ್ತಿ ಬದುಕು ಮತ್ತು ಖಾಸಗಿ ಜೀವನವನ್ನು ಮಹಿಳೆಯರು ಪ್ರತ್ಯೇಕವಾಗಿಯೇ ಕಾಣಬೇಕು ಎಂದಿದ್ದಾರೆ.
ನಂತರ ತಮ್ಮ ಬಾಲ್ಯ ಜೀವನದ ಬಗ್ಗೆ ಬರೆದಿರುವ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ, ನಮ್ಮ ಪೋಷಕರು ಮೂವರೂ ಮಕ್ಕಳನ್ನು ಸಮಾನವಾಗಿ ನೋಡುತ್ತಿದ್ದರು. ಇಬ್ಬರು ಸೋದರಿಯರು ಮತ್ತು ಒಬ್ಬ ಸೋದರರ ಮಧ್ಯೆ ಯಾವುದೇ ತಾರತಮ್ಯ ಮಾಡುತ್ತಿರಲಿಲ್ಲ. ಶಿಕ್ಷಣ, ಭವಿಷ್ಯದ ಯೋಜನೆಗಳ ವಿಷಯ ಬಂದಾಗ ಲಿಂಗ ಆಧಾರಿತ ತಾರತಮ್ಯವನ್ನು ಮಾಡುತ್ತಿರಲಿಲ್ಲ. ನಿನ್ನ ಅಜ್ಜ- ಅಜ್ಜಿ ಯಾವಾಗಲೂ ತಮ್ಮ ಮೂವರು ಮಕ್ಕಳಿಗೂ ಒಂದೇ ಸಂದೇಶವನ್ನು ನೀಡುತ್ತಿದ್ದರು. ಅವರ ಸಂದೇಶ ಸಮರ್ಪಣಾ ಭಾವದಿಂದ ಕೆಲಸ ಮಾಡುವುದು ಮತ್ತು ತೃಪ್ತಿಯನ್ನು ನಮಗೆ ನೀಡಿದೆ. ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಪ್ರಾರಂಭಿಕ ಹಂತವನ್ನು ನಾವು ಅವರಿಂದ ಕಲಿತಿದ್ದೇವೆ. ನಾನು ಸ್ವತಂತ್ರವಾದ ಜೀವವನ್ನು ಆರಂಭಿಸುವದಕ್ಕೂ ಅವರ ಸಂದೇಶದಿಂದ ಸಹಾಯವಾಗಿದೆ.
ಆಕಸ್ಮಿಕವಾಗಿ ಎರಗಿಬಂದ ಹೃದಯಾಘಾತದಿಂದ ನನ್ನ ತಂದೆ ತೀರಿಕೊಂಡಾಗ ನನಗೆ ಕೇವಲ 13 ವರ್ಷ. ತಂದೆಯಿಲ್ಲದೇ ಬದುಕನ್ನು ಎದುರಿಸಬೇಕಾದ ಅನಿವಾರ್ಯ ಸ್ಥಿತಿಗೆ ನಾವು ಸಿಲುಕಿದೆವು. ಇದುವರೆಗೆ ಜೀವನದಲ್ಲಿ ಏನೇ ಸವಾಲು ಎದುರಾದರೂ ನಮ್ಮ ರಕ್ಷಣೆಗೆ ತಂದೆ ಇರುತ್ತಿದ್ದರು. ಆದರೆ, ಯಾವುದೇ ಸುಳಿವೇ ಇಲ್ಲದೇ ಎಲ್ಲವೂ ರಾತ್ರೋರಾತ್ರಿ ಬದಲಾಗಿತ್ತು. ಅಲ್ಲಿಯ ವರೆಗೂ ನನ್ನ ತಾಯಿ ಗೃಹಿಣಿಯ ಪಾತ್ರವನ್ನಷ್ಟೇ ನಿಭಾಯಿಸಿದ್ದಳು. ಮಕ್ಕಳನ್ನು ಬೆಳೆಸುವ ಎಲ್ಲ ಜವಾಬ್ದಾರಿ ಆಕೆಯ ಹೆಗಲೇರಿತು. ಆಗಲೇ ನಮಗೆ ಗೊತ್ತಾಗಿದ್ದು, ಆಕೆ ಎಷ್ಟು ಬಲಿಷ್ಠ ಮಹಿಳೆ ಎಂಬುದು. ತನ್ನ ಕರ್ತವ್ಯವನ್ನು ಮಾಡಲು ಆಕೆ ಹೇಗೆ ನಿರ್ಧರಿಸಿದ್ದಳು ಎಂಬ ಅರಿವು ನಮಗಾಯಿತು. ಕಸೂತಿ ಕೆಲಸ ಮತ್ತು ಹೊಲಿಗೆ ಮಾಡುವ ಮೂಲಕ ತನ್ನದೇ ಆದ ಸ್ವಂತ ಉದ್ಯೋಗವನ್ನು ಕಂಡುಕೊಂಡಿದ್ದಳು. ಕುಟುಂಬವನ್ನು ನಿಭಾಯಿಸುವ ಜವಾಬ್ದಾರಿಯನ್ನು ಆಕೆಯೊಬ್ಬಳೇ ಹೊತ್ತುಕೊಂಡಿದ್ದಳು. ಆದರೆ, ಅದರ ಒತ್ತಡವನ್ನು ಎಂದಿಗೂ ನಮ್ಮ ಮುಂದೆ ತೋರ್ಪಡಿಸಿಲ್ಲ. ನಮಗೆ ಆ ಭಾವನೆ ಬರದಂತೆ ನಿಭಾಯಿಸಿದಳು. ನಾವು ಕಾಲೇಜು ಮೆಟ್ಟಿಲು ಏರುವ ತನಕವವೂ ಆಕೆ ಕಷ್ಟಪಟ್ಟು ಜೀವನವನ್ನು ಸಾಗಿಸಿದಳು. ನಾವು ಸ್ವಾವಲಂಬಿಗಳಾದೆವು. ನನ್ನ ತಾಯಿ ಅಷ್ಟೊಂದು ಆತ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಹೊಂದಿದ್ದಾರೆ ಎನ್ನುವುದು ನನಗೆ ಗೊತ್ತೇ ಇರಲಿಲ್ಲ.
ನಾನು ಐಸಿಐಸಿಐ ಬ್ಯಾಂಕಿಗೆ ಎಂಡಿ ಹಾಗೂ ಸಿಇಒ ಆಗಿದ್ದೇನೆ ಎಂದು ಪತ್ರಿಕೆಗಳಲ್ಲೆಲ್ಲಾ ಬಂದಿತ್ತು. ಕೆಲವು ದಿನಗಳ ಬಳಿಕ ನನಗೆ ನೀನೊಂದು ಇ-ಮೇಲ್ ಕಳುಹಿಸಿದ್ದೆ. "ಸಾಕಷ್ಟು ಸಮಯ ಬೇಡುವ, ಯಶಸ್ವಿ ಹಾಗೂ ಒತ್ತಡದ ಉದ್ಯೋಗದಲ್ಲಿದ್ದೀರಾ ಎಂಬುದನ್ನು ನೀವು ನಮಗೆ ಯಾವತ್ತೂ ಅರ್ಥ ಮಾಡಿಸಲೇ ಇಲ್ಲ. ನೀವು ಮನೆಯಲ್ಲಿ ತಾಯಿಯಷ್ಟೇ ಆಗಿದ್ದಿರಿ' ಎಂದು ಬರೆದಿದ್ದೆ. ನೀನು ಕೂಡ ಅದೇ ರೀತಿ ಬದುಕು, ಡಾರ್ಲಿಂಗ್.' ಎಂದು ಹೇಳಿದ್ದಾರೆ.
ನಾನು ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ 2008ರ ಅಂತ್ಯದ ವೇಳೆ ಐಸಿಐಸಿಐ ಬ್ಯಾಂಕ್‌ನ ಉಳಿವು- ಅಳವಿನ ಪ್ರಶ್ನೆ ಎದುರಾಗಿತ್ತು. ಈ ಗಂಡಾಂತರವನ್ನು ನಾವು ಎದುರಿಸಬೇಕಾಗಿಯಿತು. ಈ ಸನ್ನಿವೇಶವನ್ನು ಮಾಧ್ಯಮಗಳು ಹದ್ದಿನ ಕಣ್ಣಿನಿಂದ ನೋಡುತ್ತಿದ್ದವು. ಸಾರ್ವಜನಿಕ ಸ್ಥಳಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿದ್ದವು. ನಾನು ಕೆಲಸದಲ್ಲಿ ಸಂಪೂರ್ಣ ಮಗ್ನಳಾದೆ. ಷೇರುದಾರರೊಂದಿಗೆ ವ್ಯವಸ್ಥಿತವಾಗಿ ಮಾತುಕತೆ ನಡೆಸಿದೆ. ಸಣ್ಣ ಹೂಡಿಕೆದಾರರಿಂದ ಹಿಡಿದು ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ. ಸರ್ಕಾರದ ನಿಯಂತ್ರಕರೊಂದಿಗೂ ಮಾತುಕತೆ ನಡೆಸಿದೆ. ಹೂಡಿಕೆದಾರರು ಕಷ್ಟಪಟ್ಟು ಉಳಿಸಿದ ಹಣದ ಬಗ್ಗೆ ವ್ಯಕ್ತಪಡಿಸುತ್ತಿದ್ದ ಕಳವಳವನ್ನು ನಾನು ಅರ್ಥ ಮಾಡಿಕೊಂಡೆ. ಬ್ಯಾಂಕಿನಿಂದ ಹಣ ತೆಗೆಯಲು ಬರುವ ಹೂಡಿಕೆದಾರರಿಗೆ ಆಸನವನ್ನು ಕಲ್ಪಿಸಿ, ಅವು ಕಾದುಕುಳಿತಿರುವಾಗ ಕುಡಿಯಲು ಒಂದು ಗ್ಲಾಸ್ ನೀರು ನೀಡಿ. ಹಣವನ್ನು ಹಿಂಪಡೆಯುವುದರಿಂದ ಏನು ಪ್ರಯೋಜನವಿಲ್ಲ. ಅದು ಸಮಸ್ಯೆಗೆ ಪರಿಹಾರ ಅಲ್ಲ ಎನ್ನುವುದನ್ನು ಗ್ರಾಹಕರಿಗೆ ಮನವರಿಕೆಯಾವುವಂತೆ ಹೇಳಿ ಎಂದು ನಾನು ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.
ಅವೆಲ್ಲದರ ಮಧ್ಯೆಯೂ ನಾನು ಒಂದು ದಿನ ಒಂದೆರಡು ಗಂಟೆ ಬಿಡುವು ಮಾಡಿಕೊಂಡು ಬ್ರದರ್ಸ್ ಸ್ಕ್ವಾಶ್ ಟೂರ್ನಿಮೆಂಟ್‌ನಲ್ಲಿ ಭಾಗವಹಿಸಿದೆ. ನಾನು ಅವುಗಳನ್ನು ತಿಳಿದಿರಿಲ್ಲ. ಆದರೆ, ನಾನು ಟೂರ್ನಿಮೆಂಟ್‌ನಲ್ಲಿ ಉಪಸ್ಥಿತವಿದ್ದಿದ್ದು, ಬ್ಯಾಂಕಿನಲ್ಲಿ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ದೂರಗಾಮಿ ಪರಿಣಾಮ ಬೀರಿತು. ಕೆಲವು ತಾಯಂದಿರು ನನ್ನ ಬಳಿ ಬಂದು ನೀವು ಚಂದಾ ಕೋಚರ್ ಅವರಲ್ಲವೇ ಎಂದು ವಿಚಾರಿಸಿದರು. ನಾನು ಸಕಾರಾತ್ಮಕವಾಗಿ ಉತ್ತರಿಸಿದಾಗ ಅವರು, ಬ್ಯಾಂಕ್ ಬಿಕ್ಕಟ್ಟಿನಲ್ಲಿ ಇದ್ದಾಗಲೂ ನಿಮಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಮಯ ಸಿಗುತ್ತದೆಯೇ ಎಂದು ಪ್ರಶ್ನಿಸಿದರು. ಬ್ಯಾಂಕ್ ಸುರಕ್ಷಿತವಾಗಿದೆ ಮತ್ತು ನೀವು ಚಿಂತಿಸಬೇಕಾದ ಅಗತ್ಯವಿದಲ್ಲ ಎಂಬ ಧನಾತ್ಮಕ ಮನೋಭಾವನ್ನು ನಾನು ತೋರ್ಪಡಿಸಿದೆ.
ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮಹತ್ವವನ್ನು ತಾಯಿಯಿಂದ ಕಲಿತಿದ್ದೇನೆ. ನನ್ನ ವೃತ್ತಿ ಬದುಕನ್ನು ರೂಪಿಸಿಕೊಳ್ಳು ಕಷ್ಟಪಡುತ್ತಿದ್ದ ಸಂದರ್ಭದಲ್ಲಿಯೂ ನಾನು ನನ್ನ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿದೆ. ನನ್ನ ತಾಯಿ ಮತ್ತು ಅಳಿಯಂದಿರಿಗೆ ಸಹಾಯ ಬೇಕಾದಾಗ ಅವರ ಜತೆಗಿದ್ದೆ. ಇದಕ್ಕೆ ಪ್ರತಿಯಾಗಿ ಅವರು ತೋರ್ಪಡಿಸಿದ ಪ್ರೀತಿ ವಿಶ್ವಾಸವನ್ನು ಮರೆಯುವಂತಿಲ್ಲ. ವೃತ್ತಿಗಿಂತ ಸಂಬಂಧಗಳು ಮಹತ್ವದ್ದು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ನಾನು ಮನೆಯಲ್ಲಿ ಎಷ್ಟು ಹೊತ್ತು ಇರುತ್ತೇನೆ ಎಂಬ ಬಗ್ಗೆ ನಿನ್ನ ತಂದೆ ಯಾವತ್ತೂ ದೂರು ಹೇಳಿಲ್ಲ. ನಾವಿಬ್ಬರೂ ನನ್ಮಮ್ಮ ವೃತ್ತಿಯಲ್ಲಿ ತುಂಬಾ ಬ್ಯೂಸಿಯಾಗಿದ್ದರೂ ನಿನ್ನ ತಂದೆ ಮತ್ತು ನಾನು ನಮ್ಮ ಸಂಬಂಧವನ್ನು ಪೋಷಿಸಿದ್ದೇವೆ. ಯಾವತ್ತೂ ಭಿನ್ನಾಭಿಪ್ರಾಯ ಉಂಟಾಗಿಲ್ಲ. ಸಂದರ್ಭ ಬಂದಾಗ ನೀನು ನಿನ್ನ ಸಂಗಾತಿಯ ಜತೆ ಕೂಡ ಅದನ್ನೇ ಮಾಡುತ್ತೀಯ ಎಂದು ನಾನು ವಿಶ್ವಾಸವನ್ನು ಹೊಂದಿದ್ದೇನೆ ಎಂದು ವಿವರಿಸಿದ್ದಾರೆ.
ಕೊನೆಗೆ ಚಂದಾ ಕೋಚ್ಚರ್ ಪತ್ರದಲ್ಲಿ ತಮ್ಮ ಮಗಳ ಪರೀಕ್ಷೆ, ಅದನ್ನು ಎದುರಿಸಿದ ರೀತಿ, ಮಗಳು ತನ್ನ ತಮ್ಮನನ್ನು ಸಾಕಿ, ಸಲಹಲು ಮಾಡಿದ ಸಹಾಯ, ತೋರಿದ ಕಾಳಜಿ ಬಗ್ಗೆಯೂ ವಿವರಿಸಿದ್ದಾರೆ. ಇಂತಿ ನಿನ್ನ ಅಮ್ಮ ಎಂದು ಪತ್ರ ಬರಹ ಮುಗಿಸಿದ್ದಾರೆ.
ಇವರ ಪತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, ಮೊನ್ನೆ ಗುರುವಾರದಿಂದ ಚಂದಾ ಕೋಚ್ಚರ್ ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.