ದೇಶ

ವಿಶಾಖಪಟ್ಟಣ: ಭಿಕ್ಷಾಟನೆಗೆ ಶಿಶುಗಳು ರೂ. 200ಕ್ಕೆ ಬಾಡಿಗೆಗೆ

Sumana Upadhyaya

ವಿಶಾಖಪಟ್ಟಣ: ಮಗುವನ್ನು ಕೈಯಲ್ಲಿ ಎತ್ತಿಕೊಂಡು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸೂಪರ್ ಮಾರ್ಕೆಟ್, ಮಾಲ್ ಗಳು, ಟ್ರಾಫಿಕ್ ಜಂಕ್ಷನ್ ಗಳಲ್ಲಿ ಮಹಿಳೆಯರು ಭಿಕ್ಷೆ ಬೇಡುವುದನ್ನು ನಗರಗಳಲ್ಲಿ ನಾವು ನೋಡುತ್ತೇವೆ. ಅದರಲ್ಲೂ ಬಂದರು ನಗರಿ ವಿಶಾಖಪಟ್ನಂನಲ್ಲಿ ಈ ದೃಶ್ಯ ಸಾಮಾನ್ಯ.

ಆದರೆ ಈ ಮಕ್ಕಳು ಭಿಕ್ಷೆ ಬೇಡುವ ಮಹಿಳೆಯರ ನಿಜವಾದ ಮಕ್ಕಳಲ್ಲ ಹಾಗೂ ಕೆಲವು ಗರ್ಭಿಣಿಯರು ಭಿಕ್ಷೆ ಬೇಡುತ್ತಿರುತ್ತಾರೆ, ಅವರು ನಿಜವಾಗಿಯೂ ಗರ್ಭಿಣಿಯರಾಗಿರುವುದಿಲ್ಲ, ಹೆಚ್ಚಿನವರು ಗರ್ಭವತಿಯರಂತೆ ನಟನೆ ಮಾಡುತ್ತಾರೆ ಎಂಬ ಆತಂಕಕಾರಿ ವಿಷಯ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಈ ಸಮೀಕ್ಷೆಯನ್ನು ನಗರದ ಪ್ರಮುಖ ಪ್ರದೇಶಗಳಾದ ಆರ್ ಟಿಸಿ ಕಾಂಪ್ಲೆಕ್ಸ್, ಸತ್ಯಂ ಜಂಕ್ಷನ್, ಆರ್ ಕೆ ಬೀಚ್, ನಾಡ್, ಕೆಲವು ಹೊಟೇಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿ ಮಾಡಲಾಯಿತು. ಗರ್ಭವತಿಯಾಗಿದ್ದುಕೊಂಡು ಕೈಯಲ್ಲಿ ಮತ್ತೊಂದು ಅಳುತ್ತಿರುವ ಮಗುವನ್ನು ಎತ್ತಿಕೊಂಡು ಮಹಿಳೆ ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದರೆ ಎಂತವರ ಮನಸ್ಸು ಕೂಡ ಕರಗದೆ ಇರುವುದಿಲ್ಲ. ಇವರಲ್ಲಿ ಹೆಚ್ಚಿನ ಮಹಿಳೆಯರ ವಾಸ್ತವ ಪರಿಸ್ಥಿತಿಯಲ್ಲ ಅದು. ದಿನನಿತ್ಯ ಬಡ ಪೋಷಕರಿಂದ ಮಕ್ಕಳನ್ನು ಬಾಡಿಗೆಗೆ ಪಡೆದು ರಸ್ತೆ ಬದಿಗಳಲ್ಲಿ ಭಿಕ್ಷೆ ಬೇಡಲು ಹೋಗುತ್ತಾರೆ. ಒಂದೇ ಮಗುವನ್ನು  ಮಹಿಳೆಯರ ಗುಂಪು ಎತ್ತಿಕೊಂಡು ಒಬ್ಬೊಬ್ಬರು, ಒಂದೊಂದು ಹೊತ್ತಿನಲ್ಲಿ ಭಿಕ್ಷೆ ಬೇಡಲು ತೆರಳುತ್ತಾರೆ. ನಾವು ಇಂತಹ 17 ಮಹಿಳೆಯರನ್ನು ಗುರುತಿಸಿದ್ದೇವೆ. ಇವರಲ್ಲಿ ಕೆಲವರು ಬೇರೆ ರಾಜ್ಯಗಳಿಂದ ವಲಸೆ ಬಂದವರಾಗಿದ್ದಾರೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣೆ ಅಧಿಕಾರಿ ಎ.ಸತ್ಯನಾರಾಯಣ.

ವಿಶಾಖಪಟ್ಟಣದ ಟಟ್ಚಟ್ಲಪಲೆಂ ಬಳಿಯಿರುವ ಚಿಟ್ಟಿಬಾಬು ಕಾಲೊನಿಯಿಂದ ಸಣ್ಣ ಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ಕೆಲವು ಮಹಿಳೆಯರು ಮಕ್ಕಳನ್ನು ಉದ್ವೇಗಗೊಳಿಸುವಂತೆ ಮಾಡಿ ಆರೋಗ್ಯವಿಲ್ಲವೆಂದು ನಟಿಸಿ ಆಸ್ಪತ್ರೆ ವೆಚ್ಚಕ್ಕೆ ಹಣ ಬೇಕೆಂದು ಕೇಳುವವರಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಮಕ್ಕಳನ್ನು ಬಳಸಿ ಭಿಕ್ಷೆ ಬೇಡುವ ದಂಧೆ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರೇತರ ಸಂಸ್ಥೆ ಯುವದ ಸ್ಥಾಪಕ ಮತ್ತು ಅಧ್ಯಕ್ಷ ಬಿ.ನರೇಶ್ ಕುಮಾರ್, ಕಳೆದ ಎರಡು ತಿಂಗಳಿನಲ್ಲಿ ನಗರದಲ್ಲಿ  17ರಿಂದ 18 ವರ್ಷದ ಭಿಕ್ಷುಕಿಯರ ಸಂಖ್ಯೆ ಹೆಚ್ಚಾಗಿದ್ದು, ನಕಲಿ ಗರ್ಭವತಿಯರು ಜಾಸ್ತಿಯಾಗಿದ್ದಾರೆ. ಅವರು ಪ್ರತಿದಿನ 300ರಿಂದ 500 ರೂಪಾಯಿಗಳವರೆಗೆ ಹಣ ಸಂಪಾದನೆ ಮಾಡುತ್ತಾರೆ. ಅದರಲ್ಲಿ 200 ರೂಪಾಯಿಯಷ್ಟು ಮಗುವಿನ ನಿಜವಾದ ಪೋಷಕರಿಗೆ ನೀಡುತ್ತಾರೆ ಎನ್ನುತ್ತಾರೆ.

ಇಂತಹ ದಂಧೆ ನಡೆಸುವ ಮಹಿಳೆಯರ ಗುಂಪನ್ನು ಗುರುತಿಸಿರುವ ಸಂಘಟನೆ, ಅವರಿಗೆ ಜೀವನೋಪಾಯಕ್ಕೆ ಪರ್ಯಾಯ ದಾರಿ ಹುಡಿಕಿಕೊಳ್ಳುವಂತೆ ತಿಳಿ ಹೇಳಿದೆ.

SCROLL FOR NEXT