ಚೆನ್ನೈ: ಈ ವರ್ಷ ವಿಪರೀತ ಬೇಸಿಗೆಯ ಬಿಸಿ ದಕ್ಷಿಣ ಭಾರತದ ರಾಜ್ಯಗಳನ್ನು ಬಹಳವಾಗಿ ತಟ್ಟಿದೆ. ಉತ್ತರ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಹಲವು ಜಿಲ್ಲೆಗಳು, ಒಡಿಶಾ ಮೊದಲಾದವುಗಳು ಬಿಸಿಲಿಗೆ ಸಿಲುಕಿ ತತ್ತರಿಸಿ ಹೋಗಿವೆ. ಕೆಲವು ಕಡೆ ನೀರಿಗೆ ಕೊರತೆ, ಇನ್ನು ಕೆಲವೆಡೆ ಬರಗಾಲ ಮತ್ತೆ ಹಲವೆಡೆ ಉಷ್ಣಗಾಳಿ ಹೀಗೆ ನಾನಾ ತರದ ಸಮಸ್ಯೆಗಳು ಎದುರಾಗಿವೆ. ಕಳೆದ ವರ್ಷ ಮುಂಗಾರು ಕೈಕೊಟ್ಟಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿಸಿ ಗಾಳಿಗೆ ಸಾಯುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಕರ್ನಾಟಕ, ತೆಲಂಗಾಣ, ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಜನರು ತಿನ್ನಲು ಆಹಾರವಿಲ್ಲದೆ ಮಾಡಲು ಕೆಲಸವಿಲ್ಲದೆ ಸಾಮೂಹಿಕ ಗೂಳೆ ಹೋಗುತ್ತಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ.
ಲಾತೂರ್ ಗೆ ರೈಲಿನಲ್ಲಿ ನೀರು ಪೂರೈಕೆಯಾಗಿರಬಹುದು, ಐಪಿಎಲ್ ಟೂರ್ನಿಯನ್ನು ಮಹಾರಾಷ್ಟ್ರದಲ್ಲಿ ಆಡಬಾರದು ಎಂಬ ಹೈಕೋರ್ಟ್ ನ ಆದೇಶವಾಗಿರಬಹುದು ಇವೆಲ್ಲವೂ ಈ ವರ್ಷದ ವಿಪರೀತ ಬೇಸಿಗೆಯ ಪರಿಣಾಮ.
ಬಿಸಿಲನ್ನು ತಾಳಲಾರದೆ ತೆಲಂಗಾಣದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 85ಕ್ಕೆ ತಲುಪಿದರೆ ತೆಲಂಗಾಣದಲ್ಲಿ 60 ಜನ ಸಾವಿಗೀಡಾಗಿದ್ದಾರೆ. ಬರಗಾಲ, ನೀರಿನ ಸಮಸ್ಯೆಯಿರುವ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್ ಮತ್ತು ಟ್ಯಾಂಕರ್ ಗಳ ಮೂಲಕ ನೀರುಣಿಸುತ್ತಿವೆ. ನಮ್ಮ ರಾಜ್ಯದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಬಾಗಲಕೋಟೆ ಮೊದಲಾದ ಜಿಲ್ಲೆಗಳಿಂದ ಆಂಧ್ರಪ್ರದೇಶದ ಕರ್ನೂಲ್, ಕಡಪ, ಚಿತ್ತೂರು ಮತ್ತು ಅನಂತಪುರ, ತೆಲಂಗಾಣದ ಮೆಹಬೂಬ್ ನಗರ್ ಮತ್ತು ನಲ್ಗೊಂದ ಮೊದಲಾದ ಜಿಲ್ಲೆಗಳಿಂದ ಜನರು ಸಾಮೂಹಿಕ ವಲಸೆ ಹೋಗುತ್ತಿದ್ದಾರೆ. ವಿಪರ್ಯಾಸವೆಂದರೆ ಬರಗಾಲದ ಕಾರಣದಿಂದ ಐಪಿಎಲ್ ಮಹಾರಾಷ್ಟ್ರದಿಂದ ಹೊರಬಂದರೆ ಇನ್ನೊಂದು ಬರಗಾಲಪೀಡಿತ ರಾಜ್ಯ ಆಂಧ್ರಪ್ರದೇಶಕ್ಕೆ ಬರುವ ಸಾಧ್ಯತೆಯಿದೆ.