ನವದೆಹಲಿ: 2ನೇ ಬಾರಿಗೆ ಜಾರಿಯಾಗಿರುವ ಸಮ-ಬೆಸ ಯೋಜನೆ ದಿನಗಳೆದಂತೆ ಪರಿಣಾಮಕಾರಿಯಾಗುತ್ತಿದ್ದು, ಸಾರ್ವಜನಿಕರೊಂದಿಗೆ ವಿಐಪಿಗಳಿಗೂ ಯೋಜನೆ ಬಿಸಿ ತಟ್ಟತೊಡಗಿದೆ.
ಸೋಮವಾರ ಬೆಳಗ್ಗೆ ಸಮ-ಬೆಸ ನಿಯಮ ಉಲ್ಲಂಘಿಸಿದ ಪರಿಣಾಮ ದೆಹಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ವಿಜಯ್ ಗೋಯೆಲ್ ಅವರಿಗೆ ದೆಹಲಿ ಪೊಲೀಸರು ದಂಡ ವಿಧಿಸಿದ್ದಾರೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ತಮ್ಮ ನಿವಾಲಸದಿಂದ ತೆರಳುತ್ತಿದ್ದ ವಿಜಯ್ ಗೋಯೆಲ್ ಮನೆಯಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ಪೊಲೀಸರಿಂದ ದಂಡ ಹಾಕಿಸಿಕೊಂಡಿದ್ದಾರೆ.
ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಉದ್ದೇಶಿತ ಸಮ-ಬೆಸಯೋಜನೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದ ಬಿಜೆಪಿ ವಿಜಯ್ ಗೋಯೆಲ್ ಅವರು ಇದು ದೆಹಲಿ ಸರ್ಕಾರದ ಲೂಟಿ ಯೋಜನೆ ಎಂದು ಟೀಕಿಸಿದ್ದರು. ಆದರೆ ಅದೇ ನಿಯಮದಿಂದ ವಿಜಯ್ ಗೋಯಲ್ ಅವರು ದಂಡ ಹಾಕಿಸಿಕೊಂಡಿರುವುದು ಸೋಜಿಗವೇ ಸರಿ. ಇನ್ನು ದೆಹಲಿ ಸರ್ಕಾರ ಕೂಡ ಸಮ-ಬೆಸ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಧರಿಸಿದ್ದು, ಪ್ರತಿಪಕ್ಷಗಳ ವಿರೋಧವನ್ನು ನಿರ್ವಹಿಸಲು ಸಾಕಷ್ಟು ಪ್ರಯತ್ನಿಸುತ್ತಿದೆ.
ಇತ್ತೀಚೆಗಷ್ಟೇ ದೆಹಲಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರು ಬಿಜೆಪಿ ರಾಜ್ಯಸಭಾ ಸದಸ್ಯರನ್ನು ಭೇಟಿ ಮಾಡಿ ಸಮ-ಬೆಸ ನಿಯಮಕ್ಕೆ ವಿರೋಧ ವ್ಯಕ್ತಪಡಿಸದಂತೆ ಮನವಿ ಮಾಡಿದ್ದರು. 15 ದಿನಗಳ ಸಮಬೆಸ ಸಂಖ್ಯೆ ಯೋಜನೆ ಏಪ್ರಿಲ್ 15ರಿಂದ ಆರಂಭವಾಗಿದ್ದು, ದಿನಾಂಕ ಮತ್ತು ವಾಹನ ಸಂಖ್ಯೆಗಳಿಗೆ ಅನುಗುಣವಾಗಿ ರಸ್ತೆ ಮೇಲೆ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.