ನವದೆಹಲಿ: ಮುಸ್ಲಿ ಜನ ಪ್ರತಿನಿಧಿಗಳು ಮೊದಲ ಪತ್ನಿ ಬದುಕಿದ್ದಾಗಲೇ 2ನೇ ವಿವಾಹವಾಗಲು ಸರ್ಕಾರದ ಅನುಮತಿ ಕಡ್ಡಾಯವಾಗಿರಬೇಕು ಎಂದು ತ್ರಿಪುರ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಗಡಿ ಭದ್ರತಾ ಪಡೆ ಪಡೆಯ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 2ನೇ ವಿವಾಹವಾಗಲು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ (ಪರ್ಸನಲ್ ಲಾ) ಅವಕಾಶವಿದ್ದರೂ, ಸರ್ಕಾರಿ ನೌಕರರು ಸರ್ಕಾರು ಅಥವಾ ಜನಪ್ರತಿನಿಧಿಗಳು ಸರ್ಕಾರದ ಅನುಮತಿ ಇಲ್ಲದೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ. ನಿಯಮ ಮೀರಿ ಆತ 2ನೇ ವಿವಾಹವಾದರೆ ಅದು ದುರ್ನಡತೆಗೆ ಸಮ ಎಂದು ತ್ರಿಪುರಾ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ತಾನು ಮೊದಲನೇ ಪತ್ನಿ ಅನುಮತಿ ಪಡೆದೇ ಎರಡನೆ ಮದುವೆಯಾಗಿದ್ದೇನೆ. ತಾನು ಮುಸ್ಲಿಂ ಧರ್ಮಕ್ಕೆ ಸೇರಿದ್ದು, ನಮ್ಮ ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಒಳಪಟ್ಟು, ಅದರನ್ವಯ ಎರಡನೇ ಮದುವೆಯಾಗಿದ್ದೇನೆ. ಆದರೆ ಸರ್ಕಾರ ನನ್ನ ಎರಡನೇ ಮದುವೆ ನೆಪವೊಡ್ಡಿ ನನ್ನನ್ನು ಸೇವೆಯಿಂದ ವಜಾಗೊಳಿಸಿರುವುದು ಸರಿಯಲ್ಲ ಎಂದು ಬಿಎಸ್‌ಎ-ಅಧಿಕಾರಿ (ಗಡಿ ಭದ್ರತಾ ಪಡೆ) ಗುಲಾಂ ನಬೀ ಶೇರ್‌ಗುಜ್ರಿ ಎಂಬವರು ತ್ರಿಪುರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ತ್ರಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠ, 1964ರ ಕೇಂದ್ರ ನಾಗರಿಕ ಸೇವಾ ನಿಯಮಗಳು ಗಡಿ ಭದ್ರತಾ ಅಧಿಕಾರಿಗೂ (ಬಿಎಸ್‌ಎ) ಅನ್ವಯವಾಗುತ್ತದೆ. ಹೀಗಾಗಿ, ಸರ್ಕಾರಿ ಅಧಿಕಾರಿ ಅಥವಾ ನೌಕರ ಎರಡನೇ ಮದುವೆಯಾಗುವ ಮುನ್ನ ಸರ್ಕಾರಕ್ಕೆ ಸಮರ್ಥ ಕಾರಣಗಳನ್ನು ನೀಡಿ, ಬಳಿಕ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಇಲ್ಲಿ ವೈಯಕ್ತಿಕ ನಿರ್ಧಾರಕ್ಕಿಂತ ಸರ್ಕಾರದ ತೀರ್ಮಾನವೇ ನಿರ್ಣಾಯಕವಾಗುತ್ತದೆ. ನೌಕರ ತನ್ನ ಮನಸ್ಸಿಗೆ ತೋಚಿದಂತೆ 2ನೇ ವಿವಾಹವಾಗಲು ಸಾಧ್ಯವಿಲ್ಲ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನನ್ನು ನಾವಿಲ್ಲಿ ಆದ್ಯತೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.