ನವದೆಹಲಿ : ಮಹಾರಾಷ್ಟ್ರದಿಂದ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಹೊರಗೆ ಆಯೋಜಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಮುಂಬೈ ಕ್ರಿಕೆಟ್ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗ್ ಅವರ ಪೀಠದ ಎದುರು ಎಂಸಿಎ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿ ಸಲ್ಲಿಸಿದರು. ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಏಪ್ರಿಲ್ 25ಕ್ಕೆ ನಿಗದಿಪಡಿಸಿದೆ.
ಕ್ರಿಕೆಟ್ ಪಿಚ್‌ಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡಲಾಗುತ್ತಿಲ್ಲ. ಬದಲಾಗಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಉಪಯೋಗಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಎಂಸಿಎ ಪ್ರತಿಪಾದಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಮಹಾರಾಷ್ಟ್ರ ಭೀಕರ ಬರ ಎದುರಿಸುತ್ತಿರುವ ಸನ್ನಿವೇಶದಲ್ಲಿ ಕ್ರಿಕೆಟ್‌ಗಾಗಿ ಅಪಾರ ನೀರನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಏಪ್ರಿಲ್ 30ರ ಬಳಿಕ ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಹೊರಗೆ ಸ್ಥಳಾಂತರಿಸುವಂತೆ ಏಪ್ರಿಲ್ 13ರಂದು ಆದೇಶಿಸಿತ್ತು. ಮೇ 29 ರವರೆಗೂ ಮಹಾರಾಷ್ಟ್ರದಲ್ಲಿ ಪಂದ್ಯಗಳು ನಡೆಯಬೇಕಿತ್ತು.
ಹೈಕೋರ್ಟ್ ಆದೇಶದನ್ವಯ ಒಟ್ಟು 13 ಪಂದ್ಯಗಳು ಸ್ಥಳಾಂತರ ಮಾಡಬೇಕಿತ್ತು. ಈ ನಡುವೆ, ಬಿಸಿಸಿಐ ಮನವಿ ಮೇರೆಗೆ ಮೇ 1ರಂದು ಒಂದು ಪಂದ್ಯವನ್ನು ಪುಣೆಯಲ್ಲಿ ನಡೆಸಲು ಅದು ಅನುಮತಿ ನೀಡಿತ್ತು.
ಇನ್ನು ಬರದಿಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಪುಣೆ ಹಾಗೂ ಮುಂಬೈ ಪ್ರಾಂಚೈಸಿಗಳು ಸಿಎಂ ಪರಿಹಾರ ನಿಧಿಗೆ 5 ಕೋಟಿ ಹಣ ನೀಡಲು ಒಪ್ಪಿಕೊಂಡಿವೆ.