ದೇಶ

ಮಲ್ಯ ವಿರುದ್ಧ ಎಫ್ಐಆರ್ ದಾಖಲಿಸಿ: ಪೊಲೀಸರಿಗೆ ಉ.ಪ್ರ ನ್ಯಾಯಾಲಯ ಸೂಚನೆ

Manjula VN

ಲಖನೌ: ಮದ್ಯ ದೊರೆಯಾಗಿ ಮೆರೆಯುತ್ತಿದ್ದ ವಿಜಯ್ ಮಲ್ಯ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಉತ್ತರ ಪ್ರದೇಶ ನ್ಯಾಯಾಲಯ ಶನಿವಾರ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಕಿಂಗ್ ಫಿಶರ್ ಏರ್ ಲೈನ್ಸ್ ನ ಮಾಜಿ ಪೈಲಟ್ ಒಬ್ಬರು ಕಂಪನಿ ತಮಗೆ ನೀಡಬೇಕಿದ್ದ ವೇತನ ಹಾಗೂ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಹಣವನ್ನು ಪಾವತಿ ಮಾಡಿಲ್ಲ ಎಂದು ಹೇಳಿ ವಿಜಯ್ ಮಲ್ಯ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ಮುಖ್ಯ ಕಾರ್ಯನಿರ್ವಾಹಕ ಸಂಜಯ್ ಅಗರ್ವಾಲ್ ವಿರುದ್ಧ ಪ್ರಕರಣವೊಂದನ್ನು ದಾಖಲು ಮಾಡಿದ್ದರು. ಇದರಂತೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಅರ್ಜಿಯಲ್ಲಿ ಕಂಪನಿ ನೀಡಿದ್ದ ವೇತನದಲ್ಲಿ ರು.7 ಲಕ್ಷದಷ್ಟು ಹಣ ಟಿಡಿಎಸ್ ಕಟ್ಟಲಾಗಿತ್ತು. ಆ ಹಣವನ್ನು ಮರುಪಾವತಿ ಮಾಡಿಲ್ಲ. ಇನ್ನು ಕಳೆದ ವರ್ಷ ಆಗಸ್ಟ್ 2012 ರಿಂದ ನವೆಂಬರ್ 2014ರವರೆಗೂ ಸಂಬಳವನ್ನು ನೀಡಿಲ್ಲ. ಈ ಬಗ್ಗೆ ವಕೀಲರಾಗಿರುವ ನನ್ನ ತಂದೆ ಏರ್ ಲೈನ್ಸ್ ಗೆ ನೋಟಿಸ್ ಒಂದನ್ನು ಜಾರಿ ಮಾಡಿದ್ದರು. ನೋಟಿಸ್ ಜಾರಿಯಾದ 1 ವರ್ಷದ ನಂತರ ನನಗೆ ನೀಡಬೇಕಿದ್ದ ವೇತನದಲ್ಲಿ 1 ವರ್ಷದ ವೇತನವನ್ನು ನೀಡಲಾಗಿತ್ತು. ಆದರೆ, ಕಡಿತಗೊಳಿಸಲಾಗಿದ್ದ ಟಿಡಿಎಸ್ ಹಣವನ್ನು ಪಾವತಿ ಮಾಡಿಲ್ಲ ಎಂದು ಹೇಳಿದ್ದರು.

ಈ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ಉತ್ತರ ಪ್ರದೇಶದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಮಲ್ಯ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

SCROLL FOR NEXT