ನವದೆಹಲಿ: ಇಶ್ರಾತ್ ಜಹಾನ್ ಪ್ರಕರಣವೊಂದು ಗಂಭೀರ ವಿಚಾರವಾಗಿದ್ದು, ಚಿದಂಬರಂ ಅವರು ಪ್ರಕರಣ ಸಂಬಂಧ ನಿಷ್ಪ್ರಯೋಜಕ ಹೇಳಿಕೆಗಳನ್ನು ನೀಡಬಾರದು ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ರಾಷ್ಟ್ರೀಯ ಭದ್ರತೆಗೆ ಧಕ್ಕೆಯೊಡ್ಡುವ ಪರಿಸ್ಥಿತಿಯನ್ನು ಉಂಟು ಮಾಡಿದರೆ ಅಂತಹ ವಿಚಾರವನ್ನು ವಿಷಯಾಂತರ ಮಾಡುವ ಪ್ರಯತ್ನವನ್ನು ಮಾಡಬಾರದು. ಇಶ್ರಾತ ವಿಚಾರವೊಂದು ಗಂಭೀರ ವಿಷಯ. ಈ ವಿಷಯ ಕುರಿತಂತೆ ಮಾಜಿ ಗೃಹ ಸಚಿವರು ನಿಷ್ಪ್ರಯೋಜಕ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದಾರೆ.
ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣ ಸಂಸತ್ತಿನಲ್ಲೂ ಪ್ರತಿಧ್ವನಿಸಿದ್ದು, ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಮಾಜಿ ಗೃಹ ಸಚಿವ ಪಿ. ಚಿದಂಬರಂ ಅವರು, ಬಿಜೆಪಿ ಅಫಿಡವಿಟ್ ವಿವಾದವನ್ನು ಪ್ರಸ್ತಾಪಿಸುವ ಮೂಲಕ ವಿಷಯಾಂತರ ಮಾಡು ಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಅಫಿಡವಿಟ್ ಗಳಿಗೆಲ್ಲ ಗೃಹ ಸಚಿವರು ಸಹಿ ಮಾಡುವುದಿಲ್ಲ. ಅದನ್ನು ಅಧೀನ ಕಾರ್ಯದರ್ಶಿಗಳು ಮಾಡುತ್ತಾರೆ ಎಂದು ಹೇಳಿದ್ದರು.