ಕ್ಯಾನಿಂಗ್: ಭಾರತದ ಮೀನುಗಳಿಗೆ ರಕ್ಷಣೆ ನೀಡಲಾಗದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಡಿಯಲ್ಲಿ ಹೇಗೆ ರಕ್ಷಣೆ ನೀಡುತ್ತಾರೆಂದು ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯೊಂದರ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಬಿಜೆಪಿ ಹಾಗೂ ತೃಣಮೂಲ ಪಕ್ಷಗಳು ನೆರೆ ರಾಷ್ಟ್ರಗಳ ಮೀನು ಹಿಡಿಯುವ ದೋಣಿಗಳಿಗೆ ನಿಷೇಧ ಹೇರಿದೆ. ಆದರೂ, ನೆರೆ ರಾಷ್ಟ್ರದ ದೋಣಿಗಳು ಭಾರತದ ನೀರಿನಲ್ಲಿ ಮೀನುಗಳನ್ನು ಹಿಡಿಯುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಡಿ ಭದ್ರತೆ ಕುರಿತಂತೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಿರುತ್ತಾರೆ. ಆದರೆ, ಭಾರತದಲ್ಲಿರುವ ಮೀನುಗಳಿಗೆ ಅವರು ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಇನ್ನು ಗಡಿಯಲ್ಲಿ ಹೇಗೆ ಭದ್ರತೆ ನೀಡಲು ಸಾಧ್ಯ? ಎಂದು ಕೇಳಿದ್ದಾರೆ. ಅಲ್ಲದೆ, ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ.
ಒಂದೆಡೆ ಪಶ್ಚಿಮ ಬಂಗಾಳ ಸರ್ಕಾರ ತಮ್ಮದೇ ಆದ ನಿಯಮಗಳನ್ನು ಕೈಗೊಂಡು ಮೀನು ಹಿಡಿಯಲು ಮೀನುಗಾರರನ್ನು ಬಿಡುತ್ತಿದ್ದರೆ, ಮತ್ತೊಂದೆಡೆ ಕೇಂದ್ರದ ಮೋದಿ ಸರ್ಕಾರ ಮೀನುಗಾರರ ಜೀವನಾಧಾರನವನ್ನೇ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಬಂಗಾಳ ರಾಜ್ಯ ಭತ್ತ ಉತ್ಪಾದನೆಯಲ್ಲಿ ನಾಯಕನಂತಿತ್ತು. ಆದರೆ, ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಕ್ಕಿ ಉತ್ಪಾದನೆ ಸ್ಥಗಿತಗೊಳ್ಳಲು ಆರಂಭಿಸಿತು. ಅಕ್ಕಿಯನ್ನು ಇತರೆ ರಾಜ್ಯಗಳಿಗೆ ಹಾಗೂ ದೇಶಗಳಿಗೆ ರಫ್ತು ಮಾಡುತ್ತಿದ್ದ ಬಂಗಾಳ ಇಂದು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಮಮತಾ ಜೀ ಹಾಗೂ ಪ್ರಧಾನಿ ಮೋದಿ ಜೀ ಅವರು ಬಂಗಾಳ ಜನತೆಗೆ ಕೊಟ್ಟಿರುವ ಉಡುಗೊರೆ ಇದೇ ಎಂದು ವ್ಯಂಗ್ಯವಾಡಿದ್ದಾರೆ.