ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಎರಡು ಪ್ರಧಾನ ಕಡತಗಳನ್ನು ಜಪಾನ್ ಈ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಅದೇ ವೇಳೆ ಇನ್ನೂ ಮೂರು ಕಡತಗಳನ್ನು ಬಿಡುಗಡೆ ಮಾಡುವ ಬಗ್ಗೆ ಜಪಾನ್ ಸರ್ಕಾರ ಯಾವುದೇ ರೀತಿಯ ಭರವಸೆಯನ್ನು ನೀಡಿಲ್ಲ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜ್ಜು ಹೇಳಿದ್ದಾರೆ.
ಆ ಬಗ್ಗೆ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರಿಜ್ಜು, ಬೋಸ್ ಸಾವಿಗೆ ಸಂಬಂಧಪಟ್ಟ ಐದು ಪ್ರಧಾನ ಕಡತಗಳು ಜಪಾನ್‌ನಲ್ಲಿವೆ. ಇದರಲ್ಲಿ ಎರಡು ಕಡತಗಳನ್ನು ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವುದಾಗಿ ಜಪಾನ್ ಸರ್ಕಾರ ಹೇಳಿದ್ದು, ಇನ್ನುಳಿದ ಕಡತಗಳನ್ನೂ ಜಪಾನ್ ಆದಷ್ಟು ಬೇಗ ಬಿಡುಗಡೆ ಮಾಡಲಿ ಎಂದಿದ್ದಾರೆ.
ಏತನ್ಮಧ್ಯೆ, ಪ್ರಧಾನಿ ಕಚೇರಿ ಮತ್ತು ಗೃಹ ಸಚಿವಾಲಯದಲ್ಲಿದ್ದ ನೇತಾಜಿ ಸಾವಿಗೆ ಸಂಬಂಧಪಟ್ಟ ಕಡತಗಳು ಇನ್ನೂ ಪತ್ತೆಯಾಗಿಲ್ಲ. ಅವುಗಳಿಗಾಗಿ ಶೋಧ ನಡೆಯುತ್ತಿದೆ ಎಂದು ರಿಜ್ಜು ಹೇಳಿದ್ದಾರೆ.