ನವದೆಹಲಿ: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳ ಹೊರ ಬೀಳುತ್ತಿದ್ದು, ಖರೀದಿ ಒಪ್ಪಂದಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಸಹಿ ಹಾಕಿದ ಬಳಿಕ ಬ್ರಿಟೀಷ್ ಮೂಲದ ಮಧ್ಯವರ್ತಿ ಮೈಕೆಲ್ ದೆಹಲಿಗೆ ಪದೇ ಪದೇ ಭೇಟಿ ನೀಡಿದ್ದೇಕೆ ಎಂಬ ಅನುಮಾನಗಳು ಮೂಡತೊಡಗಿವೆ.
ಬಹು ಕೋಟಿ ವಿವಿಐಪಿ ಹಗರಣ ಸಂಬಂಧ ಭಾರತದಲ್ಲಿ ರಾಜಕೀಯ ಬಿರುಗಾಳಿಯೇ ಎದ್ದಿದ್ದು, ಪ್ರಕರಣದ ತನಿಖೆಯಿಂದ ಹೊರ ಬೀಳುತ್ತಿರುವ ಒಂದೊಂದೇ ಮಾಹಿತಿಗಳು ಹಗರಣದಲ್ಲಿ ಭಾರತೀಯ ಪ್ರಮುಖ ರಾಜಕಾರಣಿಗಳ ಕೈವಾಡವಿರುವ ಕುರಿತು ಶಂಕೆ ಮೂಡುವಂತೆ ಮಾಡುತ್ತಿವೆ. ಇದಕ್ಕೆ ಇಂಬು ನೀಡುವಂತೆ ಅಗಸ್ಟಾ ವೆಸ್ಟ್ ಲ್ಯಾಂಡ್ ಮತ್ತು ಫಿನ್ ಮೆಕಾನಿಕಾ ಸಂಸ್ಥೆಗಳೊಂದಿಗೆ ಕೇಂದ್ರ ರಕ್ಷಣಾ ಇಲಾಖೆ ಕಾಪ್ಟರ್ ಖರೀದಿ ಸಂಬಂಧ ಸಹಿ ಹಾಕಿದ ಬಳಿಕ ಮಧ್ಯವರ್ತಿ ಮೈಕೆಲ್ ಹಲವು ಬಾರಿ ದೆಹಲಿಗೆ ಪ್ರಯಾಣಿಸಿ ಇಲ್ಲಿನ ಪ್ರಭಾವಿ ರಾಜಕಾರಣಿಗಳೊಂದಿಗೆ ಚರ್ಚೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.
ಉನ್ನತ ಮೂಲಗಳ ಪ್ರಕಾರ ರಕ್ಷಣಾ ಇಲಾಖೆ ಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಬ್ರಿಟೀಷ್ ಮೂಲದ ದಲ್ಲಾಳಿ ಮೈಕೆಲ್ ಗೆ ಭಾರತದಿಂದ ದೂರವಾಣಿ ಕರೆಗಳು ಬಂದಿವೆ. ಆತನ ಲಂಡನ್ ಮೂಲದ 44778*****71 ಈ ನಂಬರ್ ಗೆ ಭಾರತದ 98*****660 ನಂಬರ್ ನಿಂದ ಕರೆ ಹೋಗಿದೆ. ಮೂಲಗಳ ಪ್ರಕಾರ ಈ ನಂಬರ್ ಭಾರತ ಮೂಲದ ಗೌತಮ್ ಕೈತಾನ್ ಅವರ ಸಂಸ್ಥೆಯದ್ದು ಎಂದು ಹೇಳಲಾಗುತ್ತಿದೆ. ಗೌತಮ್ ಕೈತಾನ್ ಕಾಪ್ಟರ್ ಖರೀದಿ ಹಗರಣದ ಭಾರತೀಯ ಮೂಲದ ಮಧ್ಯವರ್ತಿ ಎಂದು ಹೇಳಲಾಗುತ್ತಿದ್ದು, 2010ರ ಫೆಬ್ರವರಿ 15 ಮತ್ತು 2010ರ ಜೂನ್ ನಲ್ಲಿ ಮತ್ತೆ ಎರಡು ಬಾರಿ ಮೈಕೆಲ್ ಗೆ ಕರೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಅಂತೆಯೇ ದೆಹಲಿಗೆ ಬಂದಿದ್ದ ಮೈಕೆಲ್ ಭಾರತದ ಪ್ರಭಾವಿ ರಾಜಕಾರಣಿಗಳೊಂದಿಗೆ ಕಾಪ್ಟರ್ ಖರೀದಿ ಸಂಬಂಧ ಹಲವು ಬಾರಿ ಚರ್ಚೆ ನಡೆಸಿದ್ದ ಎಂದು ತಿಳಿದುಬಂದಿದೆ. ಇಟಲಿ ನ್ಯಾಯಾಲಯದ ತೀರ್ಪಿನ ಪ್ರಕಾರ ಬ್ರಿಟೀಷ್ ಮೂಲದ ದಲ್ಲಾಳಿ ಕ್ರಿಸ್ಟಿಯನ್ ಮೈಕೆಲ್ ಹೆಲಿಕಾಪ್ಟರ್ ಒಪ್ಪಂದವನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯ ಪರವಾಗಿ ಮಾಡಿಸಲು 44 ಮಿಲಿಯನ್ ಯೂರೋ ಹಣವನ್ನು ಸ್ವೀಕರಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಇಡೀ ಹಗರಣದಲ್ಲಿ ಕಾಪ್ಟರ್ ಒಪ್ಪಂದ ಅಗಸ್ಟಾ ವೆಸ್ಚ್ ಲ್ಯಾಂಡ್ ಸಂಸ್ಥೆ ಪರವಾಗಿ ಹೋಗಲು ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಇಟಲಿ ನ್ಯಾಯಾಲಯ ಹೇಳಿದೆ.
ಅಲ್ಲದೆ ಇಟಲಿ ಮೂಲಗಳ ಪ್ರಕಾರ ಮೈಕೆಲ್ ನ್ಯಾಯಾಲಯದ ಮುಂದೆ ಹಗರಣದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನಲಾದ ಪ್ರಮುಖ ಪ್ರಭಾವಿ ರಾಜಕಾರಣಿಗಳ ಹೆಸರುಗಳನ್ನು ಬಹಿರಂಗಗೊಳಿಸಿದ್ದು, ಈತನಿಂದ ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲು ಇಟಲಿ ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಭ್ರಷ್ಟಾಚಾರದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳುತ್ತಿರುವ ಭಾರತೀಯ ರಾಜಕಾರಣಿಗಳ ಮಾತು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ.