ನವದೆಹಲಿ: ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಕ್ರಾಂತಿಕಾರಿಗಳನ್ನು ಭಯೋತ್ಪಾದಕರು ಎಂದು ಉಲ್ಲೇಖಿಸದಂತೆ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಮಾನವ ಸಂಪನ್ಮೂಲ ಇಲಾಖೆ ಎಚ್ಚರಿಕೆ ನೀಡಿದೆ.
ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳಲ್ಲಿ ಆಜಾದ್, ಭಗತ್ ಸಿಂಗ್ ಅವರನ್ನು ಭಯೋತ್ಪಾದಕರು, ತೀವ್ರವಾದಿಗಳೆಂದು ಬಿಂಬಿಸಲಾಗಿದ್ದು ಇದನ್ನು ಸರಿಪಡಿಸಿಕೊಳ್ಳಬೇಕೆಂದು ಮಾನವ ಸಂಪನ್ಮೂಲ ಇಲಾಖೆ ದೆಹಲಿ ವಿವಿಗೆ ಸೂಚನೆ ನೀಡಿದೆ. ದೆಹಲಿ ವಿವಿಗೆ ಬರೆಯಲಾಗಿರುವ ಪತ್ರದಲ್ಲಿ, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರ ಕುರಿತು ಭಯೋತ್ಪಾದಕರು, ತೀವ್ರಗಾಮಿಗಳೆಂಬ ಪದ ಬಳಕೆಯಾಗಿದ್ದು ಇದರಿಂದ ರಾಷ್ಟ್ರೀಯ ಭಾವನೆಗಳಿಗೆ ನೋವುಂಟಾಗಲಿದೆ ಎಂದು ಹೆಚ್ ಆರ್ ಡಿ ಸಚಿವಾಲಯ ಹೇಳಿದೆ.
ಪ್ರಸ್ತುತದ ದಿನಗಳಲ್ಲಿ ಭಯೋತ್ಪಾದನೆಗೆ ಬೇರೆಯದ್ದೇ ಆದ ಅರ್ಥವಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ಉಲ್ಲೇಖಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೆಚ್ ಆರ್ ಡಿ ಇಲಾಖೆ ಸ್ಪಷ್ಟಪಡಿಸಿದೆ. ದೆಹಲಿ ವಿವಿಯ ಪಠ್ಯದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸೂರ್ಯ ಸೇನ್ ಅವರ ಬಗ್ಗೆ ಉಲ್ಲೇಖಿಸುವಾಗ ಕ್ರಾಂತಿಕಾರಿ ಭಯೋತ್ಪಾದಕರು ಎಂಬ ಪದ ಪ್ರಯೋಗವಾಗಿರುವ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಈ ಸೂಚನೆ ನೀಡಿದೆ.