ಜೈಪುರ: ರಾಜಸ್ತಾನ ಸರ್ಕಾರಿ ಸ್ವಾಮ್ಯದ ತಾಯಿ-ಮಕ್ಕಳ ಶುಶ್ರೂಷಾ ಕೇಂದ್ರದಲ್ಲಿ ಕುಲುಷಿತ ನೀರು ಸೇವಿಸಿದ ಪರಿಣಾಮ 7 ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಜಧಾನಿ ಜೈಪುರದಲ್ಲಿ ಈ ಘಟನೆ ನಡೆದಿದ್ದು, ವಿಶೇಷ ಆರೈಕೆಯ ಅಗತ್ಯವಿದ್ದ ಮಕ್ಕಳು ಕುಲುಷಿತ ನೀರು ಸೇವಿಸುತ್ತಿದ್ದಂತೆಯೇ ವಾಂತಿ ಮಾಡಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಶುಶ್ರೂಷಾ ಕೇಂದ್ರದಲ್ಲಿದ್ದ ಇತರೆ ಸಿಬ್ಬಂದಿಗಳು ಮತ್ತು ಮಕ್ಕಳು ಕೂಡ ವಾಂತಿ ಮಾಡಿಕೊಂಡಿದ್ದೂ, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ರಾಜಸ್ತಾನ ರಾಜಧಾನಿ ಜೈಪುರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಮಕ್ಕಳನ್ನು ದಾಖಲು ಮಾಡಲಾಗಿದ್ದು, ಈ ಪೈಕಿ ಮೂರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಅತ್ತ ತಾಯಿ-ಮಕ್ಕಳ ಶುಶ್ರೂಷಾ ಕೇಂದ್ರದಲ್ಲಿ ನಡೆದ ದುರಂತಕ್ಕೆ ರಾಜಸ್ತಾನ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಜರಿದಿರುವ ವಿರೋಧ ಪಕ್ಷದ ನಾಯಕ ಸಚಿನ್ ಪೈಲಟ್, ಇದು ಸರ್ಕಾರದ ವೈಫಲ್ಯ ಎಂದು ಟೀಕಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ಸರ್ಕಾರ ಸೂಕ್ತ ನೆರವು ಮತ್ತು ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.