ಕಾಕಿನಾಡ: ಸುಮಾರು 800 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದ ಸಾರಿಗೆ ಇಲಾಖೆ ಸಹಾಯಕ ಆಯುಕ್ತರನ್ನು ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಸಾರಿಗೆ ಇಲಾಖೆ ಸಹಾಯಕ ಆಯುಕ್ತ ಮೋಹನ್ ಎಂಬುವವರು ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಹೊಂದಿರುವ ಮನೆ ಹಾಗೂ ಕಚೇರಿಗಳ ಮೇಲೆ ಗುರುವಾರ ಮತ್ತು ಶುಕ್ರವಾರ ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ಘಟಕದ ಡಿಎಸ್ಪಿ ಎ.ರಾಮದೇವಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ದಾಖಲೆಗಳ ಪ್ರಕಾರ ಮೋಹನ್ ಅವರ ಆಸ್ತಿ ಮೌಲ್ಯ 100ರಿಂದ 120 ಕೋಟಿ ಇರಬಹುದಾಗಿದ್ದು, ಮಾರುಕಟ್ಟೆ ಬೆಲೆ ಸುಮಾರು 800 ಕೋಟಿ ಇರಬಹುದೆಂದು ನಂಬಲಾಗಿದೆ. ಇವರು ಬ್ಯಾಂಕುಗಳಲ್ಲಿ ಇಟ್ಟಿರುವ ಹಣದ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ದಾಳಿ ವೇಳೆ ಅವರ ಮನೆಯಲ್ಲಿ ಮುತ್ತು, ವಜ್ರ ಹಾಗೂ ಇತರ ಬೆಲೆಬಾಳುವ ಚಿನ್ನಾಭರಣಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಹನ್ ಅವರನ್ನು ನಿನ್ನೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ಬಂಧನಕ್ಕೊಪ್ಪಿಸಲಾಯಿತು. ಅಧಿಕಾರಿಗಳು ವಿಜಯವಾಡ, ಅನಂತಪುರ, ಕಡಪ, ಬಳ್ಳಾರಿ, ಮೇದಕ್, ನೆಲ್ಲೂರು, ಪ್ರಕಾಸಂ ಹಾಗೂ ಹೈದರಾಬಾದಿನಲ್ಲಿ ದಾಳಿ ನಡೆಸಿದ್ದಾರೆ.