ರಮಣ್ ದೀಪ್ ಸಿಂಗ್ (ಕೃಪೆ: ಎಎನ್ ಐ)
ಪಠಾಣ್ ಕೋಟ್ : ಅಪ್ಪನ ಪಿಸ್ತೂಲ್ ತೆಗೆದುಕೊಂಡು ಸಹೋದರಿಯ ಜತೆ 'ಗನ್ ಸೆಲ್ಫೀ' ಕ್ಲಿಕ್ಕಿಸಲು ಪೋಸ್ ಕೊಡುವ ವೇಳೆ ಗುಂಡು ಹಾರಿದ ಘಟನೆ ಪಂಜಾಬ್ ನ ಪಠಾಣ್ ಕೋಟ್ ನಿಂದ ವರದಿಯಾಗಿದೆ.
ಇಲ್ಲಿನ ಶಿವನಗರದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಗುರು ಹರ್ಕಿಶೆನ್ ಪಬ್ಲಿಕ್ ಸ್ಕೂಲ್ನ ಹತ್ತನೇ ತರಗತಿ ವಿದ್ಯಾರ್ಥಿ ರಮಣ್ ದೀಪ್ ಸಿಂಗ್ ಹಣೆಗೆ ಗುಂಡು ಹಾರಿದ್ದು, ಈತನನ್ನು ಲುಧಿಯಾನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಮಣ್ ದೀಪ್ ಸಿಂಗ್ ಫುಲ್ ಲೋಡ್ ಆಗಿದ್ದ .32 ರಿವಾಲ್ವರ್ನ್ನು ಹಣೆಗಿಟ್ಟು, ತನ್ನ ಮೊಬೈಲ್ ನಲ್ಲಿ ಸೆಲ್ಫೀ ಕ್ಲಿಕ್ಕಿಸುವ ವೇಳೆ ಕೈ ತಾಗಿ ಗುಂಡು ಹಾರಿದೆ. ರಮಣ್ ದೀಪ್ ಅಪ್ಪ ಗುರ್ ಕೃಪಾಲ್ ಗೆ ಸೇರಿದ ರಿವಾಲ್ವರ್ ಇದಾಗಿದೆ. ಭೂ ವ್ಯವಹಾರ ನಡೆಸುತ್ತಿರುವ ಗುರ್ ಕೃಪಾಲ್ ರಿವಾಲ್ವರ್ ಪರವಾನಗಿ ಹೊಂದಿದ್ದು, ಅವರು ಮನೆಯಲ್ಲಿ ಇಲ್ಲದ ವೇಳೆ ಮಗ ಸೆಲ್ಫೀ ಕ್ಲಿಕ್ಕಿಸುವ ಕಾರ್ಯ ಮಾಡಿದ್ದಾನೆ.
ಈ ಪ್ರಕರಣದ ಬಗ್ಗೆ ಪಠಾಣ್ಕೋಟ್ ಪೊಲೀಸರು ಕೇಸು ದಾಖಲಿಸಿದ್ದು, ಬಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.