ಡಿಎಂಕೆ ಖಜಾಂಜಿ ಮತ್ತು ತಮಿಳುನಾಡು ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್
ಇರೊಡ್(ತಮಿಳುನಾಡು): ನಾಯಕರೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ವಜಾಗೊಂಡ ಎಡಿಎಂಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಡಿಎಂಕೆ ಹಿರಿಯ ನಾಯಕ ಎಂ.ಕೆ.ಸ್ಟಾಲಿನ್ ಅವರು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಒತ್ತಾಯಿಸಿದ್ದಾರೆ.
ರಾಜ್ಯಸಭಾ ಸದನದಲ್ಲಿ ಸಂಸದೆ ಶಶಿಕಲಾ ಪುಷ್ಪಾರವರು, ತಮಗೆ ನಾಯಕರೊಬ್ಬರು ಹೊಡೆದಿದ್ದಾರೆ ಎಂದು ನಿನ್ನೆ ಆರೋಪ ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಬೇಕು ಎಂದು ಸ್ಟಾಲಿನ್ ಹೇಳಿದರು.
ನಿನ್ನೆ ರಾಜ್ಯಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸದನದ ಬಾವಿಗಿಳಿದ ಸಂಸದೆ ಶಶಿಕಲಾ ಪುಷ್ಪ, ತಮಗೆ ಹೇಳಿಕೆ ನೀಡಲು ಅವಕಾಶ ನೀಡಬೇಕೆಂದು ಸಭಾಪತಿಗಳಿಗೆ ಮನವಿ ಮಾಡಿಕೊಂಡರು. ನಂತರ ಹಲವು ಬಾರಿ ಅಳುತ್ತಾ, ತಮಗೆ ತಮಿಳುನಾಡು ಸರ್ಕಾರದಿಂದ ಬೆದರಿಕೆಯಿದ್ದು, ನಾಯಕರೊಬ್ಬರು ಹೊಡೆದಿದ್ದಾರೆ ಎಂದು ಆಪಾದಿಸಿದ್ದರು.
ಆದರೆ ಯಾರು ಹೊಡೆದದ್ದು ಮತ್ತು ಯಾವಾಗ ಎಂದು ಶಶಿಕಲಾ ಹೇಳಿರಲಿಲ್ಲ. ಈ ಬಗ್ಗೆ ನಿನ್ನೆ ರಾಜ್ಯಸಭೆಯಲ್ಲಿ ಶಶಿಕಲಾ, ಸಂಸದರೊಬ್ಬರು ನಾಯಕರಿಂದ ಪೆಟ್ಟು ತಿನ್ನಬೇಕಾದ ಪರಿಸ್ಥಿತಿ ಬಂದರೆ ಮನುಷ್ಯನಿಗೆಲ್ಲಿದೆ ಗೌರವ ಎಂದು ಪ್ರಶ್ನಿಸಿದರು. ಇದಕ್ಕೆ ಅವರದೇ ಪಕ್ಷ ಎಡಿಎಂಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ನಿನ್ನೆ ಸಂಜೆಯ ಹೊತ್ತಿಗೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಜಯಲಲಿತಾ, ಶಶಿಕಲಾ ಪುಷ್ಪ ಅವರು ಪಕ್ಷಕ್ಕೆ ಅವಮಾನ ಉಂಟುಮಾಡಿದ್ದರಿಂದ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದರು.
ಕಳೆದ ವಾರ ಶಶಿಕಲಾ ಪುಷ್ಪಾ ಡಿಎಂಕೆ ಸಂಸದ ಟಿರುಚಿ ಶಿವಾ ಅವರೊಂದಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡಿಕೊಂಡಿದ್ದರು.