ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಗುರುವಾರ ಮತ್ತೊಂದು ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ತಡೆಯಲು ಸರ್ಕಾರ ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಆರೋಪಿಗಳು ಮಾತ್ರ ಕಾನೂನಿನ ಭಯವಿಲ್ಲದೆ ತಮ್ಮ ಕೃತ್ಯಗಳನ್ನು ಮುಂದುವರೆಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ದೆಹಲಿ ಹಾಗೂ ಉತ್ತರ ಪ್ರದೇಶದ ಅಂಗಡಿಗಳಲ್ಲಿ ರೇಪ್ ವಿಡಿಯೋಗಳನ್ನು ಕೇವಲು 50 ರಿಂದ 150 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೆಹಲಿ ಹಾಗೂ ಉತ್ತರ ಪ್ರದೇಶದ ನೂರಾರು ಅಂಗಡಿಗಳಲ್ಲಿ ವಿಡಿಯೋ ಮಾರಾಟ ಮಾಡಲಾಗುತ್ತಿದೆ. ತಾಜಾ ವಿಡಿಯೋ ಆದರೆ ಅದಕ್ಕೆ ಹೆಚ್ಚಿನ ಬೆಲೆ ನಿಗದಿ ಪಡಿಸಲಾಗುತ್ತದೆ. ಹಳೆಯದಾದರೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಈ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರಿಗೂ ಸಹ ಇದರ ಬಗ್ಗೆ ಮಾಹಿತಿ ಇದೆ. ಆದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಹಾಗಂತ ಅಂಗಡಿ ಮಾಲೀಕರು ಎಲ್ಲರಿಗೂ ರೇಪ್ ವಿಡಿಯೋ ಮಾರಾಟ ಮಾಡುವುದಿಲ್ಲ. ತಮಗೆ ಪರಿಚಯ ಇರುವವರಿಗೆ ಮತ್ತು ಪರಿಚಯ ಇರುವವರ ಹೆಸರು ಹೇಳಿದರೆ ಮಾತ್ರ ವಿಡಿಯೋ ಮಾರಾಟ ಮಾಡುತ್ತಿದ್ದಾರೆ. ಡೀಲರ್ಗಳು ವಿಡಿಯೋವನ್ನು ಫೇಸ್ಬುಕ್, ಟ್ವಿಟರ್, ಆನ್ಲೈನ್ನಿಂದ ಡೌನ್‌ಲೋಡ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಇತ್ತೀಚೆಗೆ ಅತ್ಯಾಚಾರ ಎಸಗುವ ದುಷ್ಕರ್ವಿುಗಳು ತಮ್ಮ ಕೃತ್ಯವನ್ನು ರೆಕಾರ್ಡ್ ಮಾಡಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ ಅಥವಾ ತಮ್ಮ ಸ್ನೇಹಿತರ ಮೂಲಕ ಇತರರಿಗೆ ಕಳುಹಿಸುತ್ತಿದ್ದಾರೆ.