ಮೈ ಗವರ್ನ್ ಮೆಂಟ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಸ್ವಯಂ ಘೋಷಿತ ಗೋವು ರಕ್ಷಕರ ಬಗ್ಗೆ ತಮ್ಮ ಮೌನ ಮುರಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಹಸುಗಳ ರಕ್ಷಣೆ ಹೆಸರಿನಲ್ಲಿ ಅಂಗಡಿ ನಡೆಸುವವರ ದಾಖಲೆಗಳನ್ನು ಸಂಗ್ರಹಿಸಿ ವರದಿ ತಯಾರಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದಾರೆ.
ಗೋವುಗಳ ರಕ್ಷಣೆ ಹೆಸರಿನಲ್ಲಿ ಹಣ ಮಾಡುವವರ ಬಗ್ಗೆ ನನಗೆ ತುಂಬಾ ಸಿಟ್ಟಿದೆ. ಕೆಲವರು ರಾತ್ರಿ ಹೊತ್ತಿನಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಹಗಲಿನಲ್ಲಿ ಗೋವುಗಳ ರಕ್ಷಣೆ ಎಂದು ಹೇಳಿಕೊಂಡು ತಿರುಗುತ್ತಾರೆ. ಅಂಥವರು ಗೋ ರಕ್ಷಣೆ ಹೆಸರಿನಲ್ಲಿ ಅಂಗಡಿ ತೆರೆಯುತ್ತಾರೆ. ಇಂಥವರ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಇಂದು ದೆಹಲಿಯಲ್ಲಿ ಇಂದಿರಾ ಗಾಂಧಿ ಸ್ಟೇಡಿಯಂ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಹಸುಗಳು ಹಂತಕರಿಂದ ಸಾಯುತ್ತಿಲ್ಲ, ಮಲಿನಕಾರಿ, ವಿಷಕಾರಿ ಪ್ಲಾಸ್ಟಿಕ್ ಗಳಿಂದ ಸಾಯುತ್ತಿವೆ. ಪ್ಲಾಸ್ಟಿಕ್ ಬ್ಯಾಗ್ ಗಳನ್ನು ತಿಂದು ಹಸುಗಳು ಸಾಯುತ್ತವೆ. ಜನರು ಎಲ್ಲೆಂದರಲ್ಲಿ, ಬೀದಿಗಳಲ್ಲಿ ಪ್ಲಾಸ್ಟಿಕ್ ಎಸೆಯದಂತೆ ಗೋ ರಕ್ಷಕರು ಜನರಲ್ಲಿ ಅರಿವು ಮೂಡಿಸಬೇಕು. ಹಾಗೆ ಮಾಡಿದರೆ ಅದುವೇ ದೊಡ್ಡ ಸೇವೆ ಎಂದು ಪ್ರಧಾನಿ ಹೇಳಿದರು.
ಕಳೆದ ಜುಲೈ 11ರಂದು ಗುಜರಾತ್ ನ ಉನಾದಲ್ಲಿ ಹಸುವನ್ನು ಕೊಂದು ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ಗೋ ರಕ್ಷಕರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವ್ಯಾಪಕ ಟೀಕೆ ಎದುರಿಸುತ್ತಿದೆ.
ಈ ಸಂದರ್ಭದಲ್ಲಿ ಪ್ರಧಾನಿಯವರು ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.